ಹಳಿಗೆ ಮರಳಿದ ಶರ್ವಿುಳಾ; ನೋವು ಮರೆಯುವ ಹಾದಿಯಲ್ಲಿ...

Sharmila Mandre 3
Published on

ಬೆಂಗಳೂರು: ‘ಜೀವನದಲ್ಲಿ ಸಿಹಿ-ಕಹಿ ಘಟನೆಗಳು ಸಹಜ. ನನಗೆ ಈ ವರ್ಷದಲ್ಲಿ ಕಹಿಯ ಪಾಲೇ ಹೆಚ್ಚಿತ್ತು. ಒಂದಿಲ್ಲೊಂದು ತೊಡಕುಗಳು ಎದುರಾದವು. ಏನೇನೋ ಆರೋಪಗಳು ಕೇಳಿಬಂದವು. ಇದೀಗ ಅವೆಲ್ಲವೂ ಮಾಯವಾಗಿವೆ. ಹಾಗಂತ ನಾನಿನ್ನೂ ಆ ನೋವಿನಿಂದ ಹೊರಬಂದಿಲ್ಲ. ಹೊರಬರುವ ಪ್ರಯತ್ನ ನಡೆಯುತ್ತಿದೆಯಷ್ಟೇ ...’- ಹೀಗೆ ಏಳು ತಿಂಗಳ ಹಿಂದೆ ನಡೆದ ಘಟನೆಯನ್ನು ನೆನಪು ಮಾಡಿಕೊಳ್ಳುತ್ತಾರೆ ಶರ್ವಿುಳಾ ಮಾಂಡ್ರೆ.

ಹೌದು, ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಶರ್ವಿುಳಾ ಸಾಕಷ್ಟು ಚರ್ಚೆಯಲ್ಲಿದ್ದರು. ಕರೊನಾ ಲಾಕ್​ಡೌನ್ ಸಂದರ್ಭದಲ್ಲಿ ಆ ವಿಚಾರ ದೊಡ್ಡ ಸುದ್ದಿಯಾಗಿತ್ತು. ಇದೀಗ ಅಲ್ಲಿಂದ ಇಲ್ಲಿಯವರೆಗೂ ಅನುಭವಿಸಿದ ಒಂದಷ್ಟು ಯಾತನೆಯನ್ನು ಸ್ವತಃ ಅವರೇ ‘ವಿಜಯವಾಣಿ’ ಜತೆಗೆ ಹಂಚಿಕೊಂಡಿದ್ದಾರೆ.

‘ಆ ಘಟನೆ ನಡೆದ ಮೂರು ತಿಂಗಳು ಸಾಕಷ್ಟು ನೋವು ಅನುಭವಿಸಿದ್ದೇನೆ. ಮುಖಕ್ಕೆ ತೀವ್ರ ಪೆಟ್ಟಾಗಿತ್ತು. ಕೈಗಳಿಗೆ ಫ್ರ್ಯಾಕ್ಚರ್ ಆಗಿತ್ತು. ಮಾನಸಿಕವಾಗಿ ಕುಗ್ಗಿಹೋಗಿದ್ದೆ. ಜೀವನದಲ್ಲಿ ಈ ತರಹದ ಅನುಭವಗಳು ಸಹಜವಾದರೂ, ಒಂದಷ್ಟು ಅನುಭವಗಳು ಜೀವನದುದ್ದಕ್ಕೂ ಮಾಸುವುದಿಲ್ಲ. ಆವತ್ತಿನ ನೋವು ಸಹ ಹಾಗೇ ಇದೆ. ಮುಂದೆಯೂ ಇರುತ್ತದೆ. ಅದರ ಜತೆಯಲ್ಲಿಯೇ ಸಿನಿಮಾ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದೇನೆ’ ಎನ್ನುತ್ತಾರವರು. ‘ಹಲವು ತಿಂಗಳುಗಳ ಬಳಿಕ ಮತ್ತೆ ಸಿನಿಮಾ ಕೆಲಸಗಳು ಆರಂಭವಾಗಿವೆ. ಮತ್ತೆ ಕ್ಯಾಮರಾ ಎದುರಿಸುತ್ತಿದ್ದೇನೆ. ಇಷ್ಟು ದಿನ ನಟಿಯಾಗಿ ಅಥವಾ ನಿರ್ವಪಕಿಯಾಗಿ ಕಾಣಿಸಿಕೊಳ್ಳುತ್ತಿದ್ದೆ. ಇದೀಗ ‘ದಸರಾ’ ಚಿತ್ರದಲ್ಲಿ ಈ ಎರಡೂ ಜವಾಬ್ದಾರಿಗಳನ್ನು ನಿಭಾಯಿಸುತ್ತಿದ್ದೇನೆ. ಕೆಲಸದಲ್ಲಿ ಬಿಜಿಯಾಗಿದ್ದಕ್ಕೆ ಹಳೆಯ ಘಟನೆಗಳನ್ನು ಮರೆಯುವಂತಾಗಿದೆ’ ಎನ್ನುವ ಶರ್ವಿುಳಾ, ಸತೀಶ್ ನೀನಾಸಂ ಜತೆಗೆ ನಟಿಸುತ್ತಿರುವ ‘ದಸರಾ’ ಚಿತ್ರದ ಬಗ್ಗೆಯೂ ಮಾಹಿತಿ ನೀಡಿದರು.

‘ಈಗಾಗಲೇ 15 ದಿನಗಳ ಶೂಟಿಂಗ್ ಮುಕ್ತಾಯ ವಾಗಿದೆ. ಚಿತ್ರದಲ್ಲಿ ರಾತ್ರಿಯ ಚಿತ್ರೀಕರಣವೇ ಹೆಚ್ಚಿದ್ದ ಹಿನ್ನೆಲೆಯಲ್ಲಿ ಬೆಂಗಳೂರಿನ ಹಲವೆಡೆ ಚಿತ್ರೀಕರಿಸಲಾಗಿದೆ. ಇನ್ನು 20 ದಿನ ಶೂಟ್ ಮುಗಿದರೆ ಸಿನಿಮಾ ಮುಕ್ತಾಯ’ ಎಂಬುದು ಅವರ ಮಾತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net