'ನಾನೊಬ್ನೇ ಒಳ್ಳೇವ್ನು' ಎನ್ನುತ್ತಿದ್ದ ಮಹೇಶ್​ 'ಮೃಗ' ಆದಾಗ ...

Mruga - Final
Published on

ಕೆಲವು ವರ್ಷಗಳ ಹಿಂದೆ 'ನಾನೊಬ್ನೇ ಒಳ್ಳೇವ್ನು' ಎಂಬ ಚಿತ್ರದಲ್ಲಿ ನಟಿಸಿದ್ದ ಮಹೇಶ್​, ಇದೀಗ ಬಹಳ ದಿನಗಳ ನಂತರ ಎಂಟ್ರಿ ಕೊಟ್ಟಿದ್ದಾರೆ. ಈ ಬಾರಿ ಅವರು 'ಮೃಗ' ಎನ್ನುವ ಚಿತ್ರ ಮಾಡಿದ್ದು, ಶ್ರಾವಣ ಮಾಸದ ಕೊನೆಯ ಶುಕ್ರವಾರದಂದು 'ಮೃಗ' ಚಿತ್ರದ ಮುಹೂರ್ತ ರಾಜಾಜಿನಗರದ ತ್ರಯಂಬಕೇಶ್ವರ ದೇವಸ್ಥಾನದಲ್ಲಿ ನೆರವೇರಿತು.

ದೇವರ ಮೇಲೆ ಸೆರೆಹಿಡಿಯಲಾದ ಮೊದಲ ಸನ್ನಿವೇಶಕ್ಕೆ ನಿರ್ದೇಶಕ ಭಗವಾನ್ (ದೊರೆ-ಭಗವಾನ್​ ಖ್ಯಾತಿಯ) ಆರಂಭ ಫಲಕ ತೋರಿದರು. ನಟ ಧರ್ಮ ಕ್ಯಾಮೆರಾ ಚಾಲನೆ ಮಾಡಿದರು.

ಇದೊಂದು ಸಸ್ಪೆನ್ಸ್​ ಥ್ರಿಲ್ಲರ್​ ಚಿತ್ರವಾಗಿದ್ದು, ಸೆಪ್ಟೆಂಬರ್​ನಿಂದ ಚಿತ್ರೀಕರಣ ಪ್ರಾರಂಭವಾಗಲಿದೆ. ಬೆಂಗಳೂರು ಹಾಗು ಸುತ್ತಮುತ್ತ ಚಿತ್ರೀಕರಣ ನಡೆಯಲಿದೆ. ಮಹೇಶ್​ಗೆ ನಾಯಕಿಯಾಗಿ ನಿಖಿತಾ ಸ್ವಾಮಿ ನಟಿಸುತ್ತಿದ್ದಾರೆ.

'ಮೃಗ' ಚಿತ್ರವನ್ನು ಹೆಚ್.ಎಂ.ಮಾರುತಿ ನಿರ್ದೇಶಿಸುತ್ತಿದ್ದಾರೆ. ಮಾರುತಿ ಅವರಿಗೆ ಇದು ಮೊದಲ ನಿರ್ದೇಶನದ ಚಿತ್ರ. ಚಿತ್ರದ ಕುರಿತು ಮಾತನಾಡುವ ಅವರು, 'ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ ವಾಗಿದ್ದು, ಇದರಲ್ಲಿ ನಡೆಯುವ ಕ್ರ್ರೈಂಗಳಿಗೆ ಕಾರಣವೇನು? ಅದರ ಹಿಂದೆ ಯಾರಿದ್ದಾರೆ?' ಎನ್ನುವುದು ಚಿತ್ರದ ಒನ್ ಲೈನ್ ಸ್ಟೋರಿ ಎನ್ನುತ್ತಾರೆ.

ಇನ್ನು ಮಹೇಶ್​ ಇದುವರೆಗೂ ತಮ್ಮ ಪ್ರೊಡಕ್ಷನ್​ನ ಸಿನಿಮಾಗಳಲ್ಲಿ ಮಾತ್ರ ಅಭಿನಯಿಸುತ್ತಿದ್ದರು. ಈ ಬಾರಿ ಬೇರೆ ಪ್ರೊಡಕ್ಷನ್​ ಚಿತ್ರದಲ್ಲಿ ಅವರು ನಟಿಸುತ್ತಿರುವುದಕ್ಕೆ ಕಾರಣ, ಕಥೆಯಂತೆ. 'ಈ‌‌ ಕಥೆ ಕೇಳಿ ಇಷ್ಟ ಆಯಿತು. ಈ ತರಹದ್ದೊಂದು ಪಾತ್ರ ಮಾಡಿರಲಿಲ್ಲ. ಹಾಗಾಗಿ ಈ ಚಿತ್ರ ಒಪ್ಪಿಕೊಂಡೆ' ಎನ್ನುವುದು ನಾಯಕ ವಿಜಯ್ ಮಹೇಶ್ ಅವರ ಅನಿಸಿಕೆ. ಚಿತ್ರವನ್ನು ಶಶಿಕುಮಾರ್​ ಎನ್ನುವವರು ನಿರ್ಮಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net