`ಇಂಡಿಯನ್ 2' ನಂತರ `ಮುದಲ್ವನ್ 2' ... ಚಿತ್ರದ ಹೀರೋ ಯಾರು?

Final - Shankar and Vijay
Published on

ತಮಿಳಿನ ಖ್ಯಾತ ನಿರ್ದೇಶಕ ಶಂಕರ್ ಸೀಕ್ವೆಲ್‍ಗಳ ಮೇಲೆ ಸೀಕ್ವೆಲ್ ತೆಗೆಯುತ್ತಿದ್ದಾರೆ. ಈ ಹಿಂದೆ ಅವರು ತಮ್ಮದೇ `ಎಂದಿರನ್' ಚಿತ್ರಕ್ಕೆ `2.0' ಎಂಬ ಸೀಕ್ವೆಲ್ ಮಾಡಿದ್ದರು. ಆ ನಂತರ `ಇಂಡಿಯನ್' ಮುಂದುವರೆದ ಭಾಗವಾಗಿ `ಇಂಡಿಯನ್ 2' ಮಾಡುತ್ತಿದ್ದಾರೆ. ಇದೀಗ ಅವರ ತಮ್ಮ ಇನ್ನೊಂದು ಸೂಪರ್ ಹಿಟ್ ಚಿತ್ರವಾದ `ಮುದಲ್ವನ್'ನ ಮುಂದುವರೆದ ಭಾಗ ಮಾಡುತ್ತಿದ್ದಾರೆ ಎಂಬ ಸುದ್ದಿಯೊಂದು ಕಾಲಿವುಡ್‍ನಿಂದ ಬಂದಿದೆ.

ಎಲ್ಲಾ ಸರಿ, ಮೂಲ ಚಿತ್ರದಲ್ಲಿ ನಟ ಅರ್ಜುನ್ ಸರ್ಜಾ ಹೀರೋ ಆಗಿ ಕಾಣಿಸಿಕೊಂಡಿದ್ದರು. ಈಗ ಅವರ ಜಾಗದಲ್ಲಿ ಹೀರೋ ಯಾರಾಗಿರುತ್ತಾರೆ ಎಂಬ ಚರ್ಚೆ ಇದೀಗ ತಮಿಳು ಚಿತ್ರರಂಗದಲ್ಲಿ ಜೋರಾಗಿ ನಡೆಯುತ್ತಿದ್ದು, ವಿಜಯ್ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಈ ಹಿಂದೆ, ಶಂಕರ್ ಅವರು `ಮುದಲ್ವನ್' ಚಿತ್ರವನ್ನು ಮಾಡುವಾಗ, ಅವರ ಮೊದಲ ಆಯ್ಕೆ ವಿಜಯ್ ಆಗಿದ್ದರಂತೆ. ಆಗಷ್ಟೇ ತಮಿಳು ಚಿತ್ರರಂಗದಲ್ಲಿ ಹೆಸರು ಮಾಡುತ್ತಿದ್ದ ವಿಜಯ್‍ಗೆ ಈ ಕಥೆಯೂ ಬಹಳ ಇಷ್ಟವಾಗಿತ್ತಂತೆ. ಆದರೆ, ಆಗ ಅವರ ವಯಸ್ಸಿನ್ನೂ 25 ವರ್ಷ ಅಷ್ಟೇ. ಈ ವಯಸ್ಸಿನಲ್ಲೇ, ಇಂಥದ್ದೊಂದು ಪೊಲಿಟಿಕಲ್ ಚಿತ್ರ ಬಹಳ ಹೆವಿ ಆಗುತ್ತದೆ ಎನ್ನುವ ಕಾರಣಕ್ಕೆ, ಅವರು ಆ ಚಿತ್ರವನ್ನು ಕೈಬಿಟ್ಟರಂತೆ.

ಆ ನಂತರ, ಶಂಕರ್ ಇನ್ನೊಂದಿಷ್ಟು ನಾಯಕರನ್ನು ಪರಿಗಣಿಸಿ, ಅಂತಿಮವಾಗಿ ಅರ್ಜುನ್ ಸರ್ಜಾ ಜತೆಗೆ ಚಿತ್ರ ಮಾಡಿದರು. ಚಿತ್ರ ಸೂಪರ್ ಹಿಟ್ ಆಯಿತು. ಅಷ್ಟೇ ಅಲ್ಲ, ಅದೇ ಚಿತ್ರವನ್ನು ಅವರು ಹಿಂದಿಯಲ್ಲಿ `ನಾಯಕ್' ಎಂಬ ಹೆಸರಿನಲ್ಲಿ ರೀಮೇಕ್ ಸಹ ಮಾಡಿದರು.

ಇದೀಗ ಶಂಕರ್ ಅವರು ಲಾಕ್‍ಡೌನ್ ಸಮಯದಲ್ಲಿ ಕುಳಿತು, `ಮುದಲ್ವನ್ 2' ಚಿತ್ರದ ಕಥೆ ಅಂತಿಮಗೊಳಿಸಿದ್ದಾರಂತೆ. ಇದು ಸಹ ಮೊದಲ ಭಾಗದಂತೆ ಒಂದು ಪೊಲಿಟಿಕಲ್ ಥ್ರಿಲ್ಲರ್ ಆಗಿದ್ದು, ಒಬ್ಬ ದೊಡ್ಡ ನಟ ಮಾಡಿದರೆ ಚೆನ್ನಾಗಿರುತ್ತದೆ ಎಂದು ಅವರಿಗನ್ನಿಸಿದೆ. ಸದ್ಯಕ್ಕೆ ವಿಜಯ್‍ಗಿಂಥ ತಮಿಳಿನಲ್ಲಿ ಬೇರ್ಯಾವ ಸೂಪರ್‍ಸ್ಟಾರ್ ಇದ್ದಾರೆ ಹೇಳಿ? ಮೊದಲ ಭಾಗದಲ್ಲಂತೂ ನಟಿಸುವುದಕ್ಕೆ ಸಾಧ್ಯವಾಗಲಿಲ್ಲ, ಕೊನೇ ಪಕ್ಷ ಈ ಎರಡನೆಯ ಭಾಗದಲ್ಲಾದರೂ ನಟಿಸಿ ಎಂದು ವಿಜಯ್ ಅವರಿಗೆ ಶಂಕರ್ ಕೇಳಿಕೊಂಡಿದ್ದಾರಂತೆ. ವಿಜಯ್ ಸಹ ಒಂದಿಷ್ಟು ಸಮಯ ಕೊಡಿ ಎಂದು ಕೇಳಿದ್ದಾರೆ ಎಂದು ಹೇಳಲಾಗಿದೆ.

ಒಂದು ಪಕ್ಷ ವಿಜಯ್ ಚಿತ್ರದಲ್ಲಿ ನಟಿಸುವುದಕ್ಕೆ ಗ್ರೀನ್ ಸಿಗ್ನಲ್ ಕೊಟ್ಟರೂ, ಚಿತ್ರ ಸದ್ಯಕ್ಕೆ ಪ್ರಾರಂಭವಾಗುವುದಿಲ್ಲ. ಏಕೆಂದರೆ, ಶಂಕರ್ ಮೊದಲು `ಇಂಡಿಯನ್ 2' ಚಿತ್ರವನ್ನು ಮುಗಿಸಬೇಕು. ಇನ್ನು ವಿಜಯ್ ಅವರ ಕೈಯಲ್ಲೂ ಒಂದಿಷ್ಟು ಚಿತ್ರಗಳಿವೆ. ಅವೆಲ್ಲವನ್ನೂ ಮುಗಿಸಿ, ಇಬ್ಬರೂ ಒಟ್ಟಿಗೆ ಚಿತ್ರ ಮಾಡಬೇಕೆಂದರೆ, ಮಿನಿಮಮ್ ಎರಡು ವರ್ಷಗಳಾದರೂ ಬೇಕು. ಅಲ್ಲಿಯವರೆಗೂ ಇಬ್ಬರ ಅಭಿಮಾನಿಗಳು ಸ್ವಲ್ಪ ತಾಳ್ಮೆಯಿಂದ ಕಾಯಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net