

ಹೈದರಾಬಾದ್: ಟಾಲಿವುಡ್ನ ಮೋಸ್ಟ್ ವಾಂಟೆಡ್ ಹೀರೋಗಳ ಪೈಕಿ ವಿಜಯ್ ದೇವರಕೊಂಡ ಸಹ ಒಬ್ಬರು. ಒಂದು ಕಡೆ ವಿಜಯ್ ಜತೆಗೆ ಕೆಲಸ ಮಾಡಬೇಕು ಎಂದು ಹಲವು ನಿರ್ದೇಶಕರು ಮತ್ತು ನಿರ್ಮಾಪಕರು ಕನಸು ಕಂಡರೆ, ಇನ್ನೊಂದು ಕಡೆ ಅವರಿಗೆ ಸ್ವಲ್ಪವೂ ಜವಾಬ್ದಾರಿ ಇಲ್ಲ ಎಂದು ಟಾಲಿವುಡ್ನ ಜನಪ್ರಿಯ ನಿರ್ಮಾಪಕ ಮತ್ತು ವಿತರಕರೊಬ್ಬರು ಆರೋಪಿಸಿದ್ದಾರೆ.
ವಿಜಯ್ ದೇವರಕೊಂಡ ಅಭಿನಯದಲ್ಲಿ 'ವರ್ಲ್ಡ್ ಫೇಮಸ್ ಲವ್ವರ್' ಎಂಬ ಚಿತ್ರ ಕಳೆದ ವರ್ಷ ಬಿಡುಗಡೆಯಾಗಿತ್ತು. ಕ್ರಾಂತಿ ಮಾಧವ್ ನಿರ್ದೇಶನದ ಈ ಚಿತ್ರದಲ್ಲಿ ವಿಜಯ್ ದೇವರಕೊಂಡ, ಐಶ್ವರ್ಯ ರಾಜೇಶ್, ಕ್ಯಾಥರೀನ್ ತ್ರೆಸ್ಸಾ ಮುಂತಾದವರು ನಟಿಸಿದ್ದರು. ಈ ಚಿತ್ರದ ವಿತರಣೆಯ ಹಕ್ಕುಗಳನ್ನು ಅಭಿಷೇಕ್ ನಾಮ ಖರೀದಿಸಿದ್ದರು. ಆದರೆ, ಈ ಚಿತ್ರ ಅಟ್ಟರ್ ಫ್ಲಾಪ್ ಆಗಿ, ಅಭಿಷೇಕ್ ಹೂಡಿದ ಹಣದಲ್ಲಿ 10 ಪರ್ಸೆಂಟ್ ಸಹ ಬರಲಿಲ್ಲವಂತೆ.
ಈ ಸಂದರ್ಭದಲ್ಲಿ ಅವರು ವಿಜಯ್ ದೇವರಕೊಂಡಗೆ ಫೋನ್ ಮಾಡಿದ್ದಾರೆ. ಆದರೆ, ವಿಜಯ್ ಮಾತ್ರ ಅದಕ್ಕೆ ಸರಿಯಾಗಿ ಪ್ರತಿಕ್ರಿಯಿಸಿಲ್ಲ. ಇದರಿಂದ ಬೇಸರಗೊಂಡಿರುವ ಅಭಿಷೇಕ್, ದೇವರಕೊಂಡಗೆ ಸ್ವಲ್ಪವೂ ಜವಾಬ್ದಾರಿ ಇಲ್ಲ ಎಂದು ಹೇಳಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, 'ವಿಜಯ್ ದೇವಕೊಂಡಗೆ ಸ್ವಲ್ಪವೂ ಜವಾಬ್ದಾರಿ ಇಲ್ಲ. ನಾವು ಅವರ ಚಿತ್ರಕ್ಕೆ ಹಣ ಹೂಡಿ ಸಾಕಷ್ಟು ನಷ್ಟ ಮಾಡಿಕೊಂಡಾಗ, ಕನಿಷ್ಠ ಮಾತನಾಡಿಸುವ ಸೌಜನ್ಯ ತೋರಲಿಲ್ಲ. ಒಂದು ಚಿತ್ರವು ಚಿತ್ರಮಂದಿರದಲ್ಲಿ ಪ್ರದರ್ಶನವಾಗುವುದಕ್ಕೆ ಕಾರಣ, ನಿರ್ಮಾಪಕರು ಮತ್ತು ವಿತರಕರು. ಆದರೆ, ಸಂಪೂರ್ಣ ಕ್ರೆಡಿಟ್ ಹೋಗುವುದು ಹೀರೋಗೆ. ಇಷ್ಟೆಲ್ಲ ಕ್ರೆಡೆಟ್ ಪಡೆಯುವ ಅವರು, ಸ್ವಲ್ಪ ಜವಾಬ್ದಾರಿ ಪ್ರದರ್ಶಿಸಬೇಕು' ಎಂದು ಅಭಿಷೇಕ್ ಹೇಳಿದ್ದಾರೆ.