ಒಂದು ಕಾಲದಲ್ಲಿ ಐಟಂ ಡಾನ್ಸ್​ನಿಂದಲೇ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದ ಡಿಸ್ಕೋ ಶಾಂತಿ ಈಗ ಹೇಗಿದ್ದಾರೆ ನೋಡಿ! Disco Shanti

Disco Shanti
Published on

Disco Shanti : ಸಿನಿಪ್ರಿಯರಿಗೆ ಹೀರೋ ಮತ್ತು ಹೀರೋಯಿನ್​ಗಳ ವೈಯಕ್ತಿಕ ಮಾಹಿತಿ ತಿಳಿದುಕೊಳ್ಳುವ ಕುತೂಹಲ ಇದ್ದೇ ಇರುತ್ತದೆ. ಅವರು ಬಳಸುವ ಕಾರುಗಳು, ದಿನನಿತ್ಯ ಜೀವನದಲ್ಲಿ ಅವರ ಹವ್ಯಾಸಗಳು, ಧರಿಸುವ ಬಟ್ಟೆ, ಮೊಬೈಲ್​ ಹಾಗೂ ವಾಚ್​ ಬೆಲೆ ಎಷ್ಟು? ವಾಸಿಸುವ ಮನೆ ಎಷ್ಟು ಬೆಲೆ ಬಾಳುತ್ತದೆ? ಮತ್ತು ಯಾವ ಯಾವ ವಸ್ತುಗಳನ್ನು ಆಗಾಗ ಬಳಕೆ ಮಾಡುತ್ತಾರೆ? ಎಂಬಿತ್ಯಾದಿ ವಿಚಾರಗಳನ್ನು ತಿಳಿದುಕೊಳ್ಳಲು ಬಯಸುತ್ತಾರೆ. ಇದಿಷ್ಟೇ ಅಲ್ಲದೆ, ಆಗಿನ ಕಾಲದ ನಟ-ನಟಿಯರು ಹಾಗೂ ತಮ್ಮ ಪಾತ್ರಗಳಿಂದಲೇ ಗಮನ ಸೆಳೆದ ಕಲಾವಿದರು ಈಗ ಹೇಗಿದ್ದಾರೆ ಎಂದು ತಿಳಿದುಕೊಳ್ಳುವ ಕುತೂಹಲವೂ ಜಾಸ್ತಿ ಇರುತ್ತದೆ.

ಸಿನಿಮಾ ಅಂದರೆ ಅಲ್ಲೊಂದು ಐಟಂ ಡಾನ್ಸ್​ ಇರಲೇಬೇಕು ಅನ್ನುವ ಮಾತಿದೆ. ಸಿನಿಮಾ ನಾಯಕಿಯರು ಮತ್ತು ಐಟಂ ಡ್ಯಾನ್ಸರ್‌ಗಳು ಪ್ರೇಕ್ಷಕರಿಗೆ ತುಂಬಾ ಇಷ್ಟವಾಗುತ್ತಾರೆ. ಸ್ಟಾರ್ ಹೀರೋಗಳಿಗೆ ಸರಿಸಮನಾದ ಅಭಿಮಾನಿಗಳನ್ನು ಹೊಂದಿದ್ದಾರೆ. ಇಂದು ಸ್ಟಾರ್​ ನಟಿಯರೇ ಐಟಂ ಡಾನ್ಸ್​ಗಳನ್ನು ಮಾಡುತ್ತಿದ್ದಾರೆ. ಆದರೆ, ಈ ಹಿಂದೆ ಆಗಿರಲಿಲ್ಲ. ಐಟಂ ಡಾನ್ಸ್​ಗೆ ಅಂಥ ಕೆಲ ನಟಿಯರು ಇರುತ್ತಿದ್ದರು. ಉದಾಹರಣೆಗೆ ಡಿಸ್ಕೋ ಶಾಂತಿ, ಅನುರಾಧ, ಜ್ಯೋತಿಲಕ್ಷ್ಮೀ, ಸಿಲ್ಕ್​ ಸ್ಮಿತಾ ಹಾಗೂ ಜಯಮಾಲಿನಿಯಂತಹ ಕಲಾವಿದರು ನಟನೆಗಿಂತ ಹೆಚ್ಚಾಗಿ ಐಟಂ ಡಾನ್ಸ್​ಗಳಲ್ಲೇ ಕಾಣಿಸಿಕೊಳ್ಳುತ್ತಿದ್ದರು.

80ರ ದಶಕದಲ್ಲಿ ಹೆಚ್ಚು ಸದ್ದು ಮಾಡಿದ ಐಟಂ ಡಾನ್ಸರ್​ ಅಂದರೆ ಅದು ಡಿಸ್ಕೋ ಶಾಂತಿ ( Disco Shanti ). ಕನ್ನಡ, ತಮಿಳು, ತೆಲುಗು ಹಿಂದಿ ಮತ್ತು ಮಲಯಾಳಂ ಭಾಷೆಗಳ ಎಲ್ಲ ಸ್ಟಾರ್​ ನಟರ ಸಿನಿಮಾಗಳಲ್ಲಿ ಡಿಸ್ಕೋ ಶಾಂತಿ ನಟಿಸಿದ್ದಾರೆ. 900ಕ್ಕೂ ಅಧಿಕ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ. ತಮ್ಮ ಹಾಟ್​ ಲುಕ್​ನಿಂದಲೇ ಪಡ್ಡೆಹುಡುಗರ ನಿದ್ದೆಗೆಡೆಸಿದ್ದರು. ಆ ಕಾಲದಲ್ಲೇ ಐಟಂ ಡಾನ್ಸ್​ನಲ್ಲಿ ಅರೆಬರೆ ಬಟ್ಟೆ ಉಟ್ಟು, ಮೈಚಳಿ ಬಿಟ್ಟು ಸೊಂಟ ಬಳುಕಿಸುತ್ತಿದ್ದರು. ಇವರ ಐಟಂ ಡಾನ್ಸ್​ ನೋಡಲೆಂದೇ ಅನೇಕರು ಸಿನಿಮಾಗೆ ಹೋಗುತ್ತಿದ್ದರು.

Disco Shanti 3

ಡಿಸ್ಕೋ ಶಾಂತಿ ಅವರು ಕನ್ನಡದಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಸತ್ಕಾರ, ಆಫ್ರಿಕದಲ್ಲಿ ಶೀಲಾ, ಹುಲಿ ಹೆಬ್ಬುಲಿ, ಜಯಸಿಂಹ, ಅಂಜದ ಗಂಡು, ಸಾಂಗ್ಲಿಯಾನ, ಸಿಬಿಐ ಶಂಕರ್, ಪದ್ಮವ್ಯೂಹ, ಒಂಟಿ ಸಲಗ, ನಮ್ಮೂರ ಹಮ್ಮೀರ, ಕಿಲಾಡಿ ತಾತ ಹಾಗೂ ಎಸ್​ಪಿ ಭಾರ್ಗವಿ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ಡಿಸ್ಕೋ ಶಾಂತಿ ಸೊಂಟ ಬಳುಕಿಸಿದ್ದಾರೆ. ಕನ್ನಡಕ್ಕಿಂತ ತಮಿಳು ಮತ್ತು ತೆಲುಗಿನಲ್ಲಿ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದರು.

ಡಿಸ್ಕೋ ಶಾಂತಿ ಆರಂಭದಲ್ಲಿ ನಟಿಯಾಗಿ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟರು. ಪ್ರತಿಭೆ ಇದ್ದರೂ ಅವಕಾಶ ಸಿಗದ ಹಿನ್ನೆಲೆಯಲ್ಲಿ ಡಾನ್ಸ್ ಮಾಡುತ್ತಾ ಗ್ಲಾಮರ್ ನಟಿಯಾದರು. ಐಟಂ ಡ್ಯಾನ್ಸ್‌ಗೆ ಹೆಸರುವಾಸಿಯಾಗಿರುವ ನಟಿ ಡಿಸ್ಕೋ ಶಾಂತಿ, ಪ್ರಸಿದ್ಧ ನಟ ಆನಂದನ್ ಅವರ ಮಗಳು. ತಂದೆಯ ಮರಣದ ನಂತರ, ಕುಟುಂಬದ ಜವಾಬ್ದಾರಿ ಹೊತ್ತ ಶಾಂತಿ, ಚಿಕ್ಕ ವಯಸ್ಸಿನಲ್ಲೇ ಚಿತ್ರರಂಗಕ್ಕೆ ಬಂದರು. ನಾಯಕಿಯಾಗಿ ಪಯಣ ಆರಂಭಿಸಿ, ಕೊನೆಗೆ ಗ್ಲಾಮರಸ್ ನಟಿಯಾಗಿ ಹೆಸರು ಮಾಡಿದರು.

Disco Shanti 2

ಈ ನಡುವೆ 1996ರಲ್ಲಿ ತೆಲುಗು ನಟ ಶ್ರೀಹರಿಯನ್ನು ಪ್ರೀತಿಸಿ ಮದುವೆಯಾದರು. ಮದುವೆಯ ನಂತರ ಚಿತ್ರರಂಗದಿಂದ ದೂರ ಸರಿದು ಕುಟುಂಬ ಸಮೇತ ಹೈದರಾಬಾದ್​ನಲ್ಲಿ ನೆಲೆಸಿದರು. ಅವರಿಗೆ ಅಕ್ಷರ ಎಂಬ ಮಗಳು ಮತ್ತು ಶಶಾಂಕ್ ಮತ್ತು ಮೆಗಮ್ಶ್ ಎಂಬ ಪುತ್ರರಿದ್ದಾರೆ. ನಟ ಶ್ರೀಹರಿ ಯಕೃತ್ತಿನ ಕಾಯಿಲೆಯಿಂದ ನಿಧನರಾದರು. ಇದರಿಂದ ತೀವ್ರ ಖಿನ್ನಳಾದ ಶಾಂತಿ ದಿನವೂ ಕುಡಿತದ ಚಟಕ್ಕೆ ಬಿದ್ದಿದ್ದರು.

ನನ್ನ ಪತಿಯ ಮರಣದ ನಂತರ ಅವರ ಬ್ಯಾಂಕ್​ ಖಾತೆಯಲ್ಲಿ ಕೇವಲ 15 ಲಕ್ಷ ರೂಪಾಯಿ ಇತ್ತು. ನನ್ನ ಮನೆಯಲ್ಲಿ ಕೆಲಸ ಮಾಡುವವರಿಗೆ ಅದನ್ನು ಕೊಟ್ಟೆ. ನನ್ನ ಮಕ್ಕಳು ಬಳಲುತ್ತಿರುವುದನ್ನು ನಾನು ನೋಡಲಾರೆ. ಹಾಗಾಗಿ ನಮ್ಮ ಬಳಿಯಿದ್ದ ಒಂದು ಸ್ಥಳವನ್ನು ಮಾರಿದೆ. ನಂತರ ಆ ಹಣವನ್ನು ಬ್ಯಾಂಕಿನಲ್ಲಿ ಹಾಕಿ ಅದರಿಂದ ಬರುವ ಬಡ್ಡಿ ಹಣದಿಂದ ಜೀವನ ನಡೆಸುತ್ತಿದ್ದೇವೆ. ಒಂದಾನೊಂದು ಕಾಲದಲ್ಲಿ ದುಡಿಯುವ ಊಟಕ್ಕೂ ಸಾಕಷ್ಟು ತೊಂದರೆ ಅನುಭವಿಸಿದ್ದೆವು ಎಂದು ಡಿಸ್ಕೋ ಶಾಂತಿ ಈ ಹಿಂದೆ ಮಾಧ್ಯಮದಲ್ಲಿ ಹೇಳಿಕೊಂಡಿದ್ದರು. ಸದ್ಯ ಡಿಸ್ಕೋ ಶಾಂತಿ ಅವರು ತಮ್ಮ ಮಕ್ಕಳೊಂದಿಗೆ ಜೀವನ ಸಾಗಿಸುತ್ತಿದ್ದಾರೆ. (ಏಜೆನ್ಸೀಸ್​)

Disco Shanti 1
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net