

ಬೆಂಗಳೂರು: ಅನುಮತಿ ಇಲ್ಲದೆ 'ಕಾಂತಾರ' ಚಿತ್ರದ 'ವರಾಹ ರೂಪಂ' ಹಾಡನ್ನು ಎಲ್ಲೂ ಬಳಸುವಂತಿಲ್ಲ ಎಂದು ಕೇರಳದ ಕೋರ್ಟ್ ಆದೇಶ ನೀಡಿದ ಹಿನ್ನೆಲೆಯಲ್ಲಿ ಯೂಟ್ಯೂಬ್ ಸೇರಿದಂತೆ ಹಲವು ವೇದಿಕೆಗಳಿಂದ ಹಾಡನ್ನು ತೆಗೆಯಲಾಗಿದೆ.
ರಿಷಭ್ ಶೆಟ್ಟಿ ಅಭಿನಯದ ಮತ್ತು ನಿರ್ದೇಶನದ 'ಕಾಂತಾರ' ಚಿತ್ರದಲ್ಲಿರುವ 'ವರಾಹ ರೂಪಂ' ಹಾಡನ್ನು 'ನವರಸಂ' ಎಂಬ ಮಲಯಾಳಂ ಹಾಡಿನಿಂದ ಯಥಾವತ್ತಾಗಿ ಎರವಲು ಪಡೆಯಲಾಗಿದೆ ಎಂದು ಸುದ್ದಿಯಾಗಿತ್ತು. ಈ ಹಾಡನ್ನು ಮಲಯಾಳಂನ ಜನಪ್ರಿಯ ಬ್ರಾಂಡ್ ಥಾಯ್ಕುಡಂ ಬ್ರಿಡ್ಜ್ ರೂಪಿಸಿದ್ದು, ಚಿತ್ರತಂಡದವರ ಮೇಲೆ ಕೃತಿಚೌರ್ಯದ ಆರೋಪ ಹೊರಿಸಿತ್ತು. ಹಾಡನ್ನು ಬಳಿಸಿದ್ದಕ್ಕೆ ಕ್ರೆಡಿಟ್ ಕೊಡಬೇಕು, ಇಲ್ಲ ಹಾಡನ್ನು ಬಳಸವುದಕ್ಕೆ ಅನುಮತಿ ನೀಡಬಾರದು ಎಂದು ಥಾಯ್ಕುಡಂ ಬ್ರಿಡ್ಜ್, ಕೋರ್ಟ್ಗೆ ಮನವಿ ಮಾಡಿತ್ತು.
ಅರ್ಜಿ ವಿಚಾರಣೆ ನಡೆಸಿದ ಕೇರಳದ ಕೋರ್ಟ್ ‘ವರಾಹ ರೂಪಂ ...’ ಹಾಡಿನ ಮೇಲೆ ನಿರ್ಬಂಧ ಹೇರಿತ್ತು. ‘ಯೂಟ್ಯೂಬ್ ಸೇರಿದಂತೆ ಯಾವುದೇ ಪ್ಲಾಟ್ಫಾರ್ಮ್ಗಳಲ್ಲಿ ‘ಕಾಂತಾರ’ ಚಿತ್ರದ ‘ವರಾಹ ರೂಪಂ ...’ ಹಾಡನ್ನು ಒಪ್ಪಿಗೆ ಇಲ್ಲದೆ ಬಳಸಬಾರದು’ ಎಂದು ಆದೇಶ ಹೊರಡಿಸಿತ್ತು.
ಇದಕ್ಕೆ ತಲೆ ಬಾಗಿರುವ ಚಿತ್ರತಂಡವು, ದೊಡ್ಡ ಸೆನ್ಸೇಷನ್ ಹುಟ್ಟುಹಾಕಿದ್ದ 'ವರಾಹ ರೂಪಂ' ಹಾಡನ್ನು ಯೂಟ್ಯೂಬ್ನ ಹೊಬಾಳೆ ಫಿಲಂಸ್ನ ಚಾನಲ್ ಸೇರಿದಂತೆ ಮ್ಯೂಸಿಕ್ ಆ್ಯಪ್ಗಳಾದ ಸಾವನ್ ಮುಂತಾದ ಕಡೆಗಳಿಂದ ಹಾಡನ್ನು ಡಿಲೀಟ್ ಮಾಡಿದೆ. ಇನ್ನು ಮುಂದೆ, 'ವರಾಹ ರೂಪಂ' ಹಾಡು ಯೂಟ್ಯೂಬ್ ಆಗಲೀ ಅಥವಾ ಮಿಕ್ಕ ಹಾಡುಗಳ ಆಪ್ಗಳಲ್ಲಿ ಲಭ್ಯವಿರುವುದಿಲ್ಲ.