

ಬೆಂಗಳೂರು: ಕಾಂಗ್ರೆಸ್ ಪಕ್ಷವನ್ನು ತೊರೆದು ಇತ್ತೀಚೆಗಷ್ಟೇ ಶಿವಸೇನೆಗೆ ಸೇರಿರುವ ನಟಿ ಊರ್ಮಿಳಾ ಮಾತೊಂಡ್ಕರ್ ಕೆಲವು ದಿನ 'ಇಲ್ಲಿ' ಕಾಣಿಸಿಕೊಂಡಿರಲಿಲ್ಲ. ಇದೀಗ ವಾಪಸ್ ಬಂದಿರುವ ಅವರು ಆ ಬಗ್ಗೆ ಹೇಳಿಕೊಂಡಿದ್ದು, ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ.
ಅಂದಹಾಗೆ ಇದು ಪಕ್ಷಾಂತರದ ವಿಷಯ ಅಲ್ಲ. 'ಇಲ್ಲಿ' ಎಂದರೆ ಇದು ಸೋಷಿಯಲ್ ಮೀಡಿಯಾಗೆ ಸಂಬಂಧಿತ ವಿಷಯ. ಏಕೆಂದರೆ ಕೆಲವು ದಿನಗಳ ಹಿಂದೆ ರಂಗೀಲಾ ಹುಡುಗಿ ಊರ್ಮಿಳಾರ ಇನ್ಸ್ಟಾಗ್ರಾಮ್ ಖಾತೆ ಹ್ಯಾಕ್ ಆಗಿತ್ತು. ಆ ಬಗ್ಗೆ ಸೈಬರ್ ಕ್ರೈಮ್ಗೆ ದೂರು ಕೊಟ್ಟು, ಮತ್ತೆ ಇನ್ಸ್ಟಾಗ್ರಾಮ್ಗೆ ಎಂಟ್ರಿ ಸಿಕ್ಕ ಬಳಿಕದ ವಿಷಯವನ್ನು ಊರ್ಮಿಳಾ ಹಂಚಿಕೊಂಡಿದ್ದಾರೆ. 'ಅಯಾಮ್ ಬ್ಯಾಕ್ ಆನ್ ಇನ್ಸ್ಟಾಗ್ರಾಮ್' ಎಂದು ಹೇಳಿಕೊಂಡಿರುವ ಅವರು, ಮುಂಬೈ ಪೊಲೀಸರಿಗೆ ಹಾಗೂ ಇನ್ಸ್ಟಾಗ್ರಾಮ್ ತಂಡಕ್ಕೆ ಧನ್ಯವಾದ ತಿಳಿಸಿದ್ದಾರೆ.
ಸೈಬರ್ ಕ್ರೈಮ್ ಎಂಬುದು ಮಹಿಳೆಯರು ಹಗುರವಾಗಿ ತೆಗೆದುಕೊಳ್ಳುವಂಥ ವಿಷಯವಲ್ಲ. ನನ್ನ ಇನ್ಸ್ಟಾಗ್ರಾಮ್ ಖಾತೆ ಹ್ಯಾಕ್ ಆಗಿರುವ ಕುರಿತು ಮುಂಬೈ ಸೈಬರ್ ಕ್ರೈಮ್ ಪೊಲೀಸರಿಗೆ ದೂರು ನೀಡಲು ಹೋದಾಗ ಸೈಬರ್ ಕ್ರೈಮ್ ಡಿಸಿಪಿ ರಶ್ಮಿ ಕರಂಡಿಕರ್ ಅವರ ಭೇಟಿಯಾಯಿತು. ಸೈಬರ್ ಕ್ರೈಮ್ ಸಂಬಂಧಿತ ವಿಷಯದ ಬಗ್ಗೆ ಆಗ ಅವರು ಮತ್ತಷ್ಟು ಅಂಶಗಳನ್ನು ತಿಳಿಸಿದರು. ಮುಂದೆ ಇಬ್ಬರೂ ಈ ವಿಷಯದ ಬಗ್ಗೆ ಒಂದಷ್ಟು ಕೆಲಸ ಮಾಡಲಿದ್ದೇವೆ ಎಂದೂ ಊರ್ಮಿಳಾ ಹೇಳಿಕೊಂಡಿದ್ದಾರೆ.