ಮತ್ತೆ ಒಂದಾದರು ಶಿವಣ್ಣ-ಉಪೇಂದ್ರ; 15 ವರ್ಷಗಳ ಬಳಿಕ ಜೊತೆಯಾಗಿ ತೆರೆ ಮೇಲೆ..

Uppi Shivanna
Published on

ಬೆಂಗಳೂರು: ಶಿವರಾಜಕುಮಾರ್​ ಮತ್ತು ಉಪೇಂದ್ರ ಒಟ್ಟಿಗೆ ಬಂದಾಗಲೆಲ್ಲ ಬಾಕ್ಸ್​ ಆಫೀಸ್​ ಮೇಲೆ ಸವಾರಿ ಮಾಡಿದ್ದಾರೆ. ಅದು ಉಪೇಂದ್ರ ನಿರ್ದೇಶಿಸಿ, ಶಿವರಾಜ್​ಕುಮಾರ್​ ನಟಿಸಿದ್ದ "ಓಂ' ಚಿತ್ರವಾಗಿರಬಹುದು ಅಥವಾ ಇಬ್ಬರೂ ಒಟ್ಟಿಗೆ ನಟಿಸಿರುವ "ಪ್ರೀತ್ಸೆ' ಹಾಗೂ "ಲವ ಕುಶ' ಚಿತ್ರಗಳಾಗಿರಬಹುದು. ಈ ಎಲ್ಲ ಚಿತ್ರಗಳೂ ಹಿಟ್​ ಲಿಸ್ಟ್​ ಸೇರಿವೆ. ಈಗ ಈ ಜೋಡಿ 15 ವರ್ಷಗಳ ಬಳಿಕೆ ಮತ್ತೆ ತೆರೆಯ ಮೇಲೆ ಒಂದಾಗಲಿದೆ. ಅದು ಸಂಗೀತ ನಿರ್ದೇಶಕ ಅರ್ಜುನ್​ ಜನ್ಯ ಆ್ಯಕ್ಷನ್​-ಕಟ್​ ಹೇಳುತ್ತಿರುವ ಚೊಚ್ಚಲ ಸಿನಿಮಾ "45'ರಲ್ಲಿ.

"45' ಪ್ಯಾನ್​ ಇಂಡಿಯಾ ಚಿತ್ರವಾಗಿದ್ದು, "ಗಾಳಿಪಟ 2' ನಿರ್ಮಿಸಿದ್ದ ರಮೇಶ್​ ರೆಡ್ಡಿ ಈ ಚಿತ್ರವನ್ನೂ ನಿರ್ಮಿಸುತ್ತಿದ್ದಾರೆ. ಶಿವರಾಜಕುಮಾರ್​ ಅವರ ಹುಟ್ಟುಹಬ್ಬದಂದು ಘೋಷಣೆಯಾದ "45' ಈಗ ಪ್ರಿ-ಪ್ರೊಡಕ್ಷನ್​ ಕೆಲಸಗಳಲ್ಲಿ ಬಿಜಿಯಾಗಿದೆ. ಕನ್ನಡ, ತೆಲುಗು, ಹಿಂದಿ, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ಬಹುಕೋಟಿ ವೆಚ್ಚದಲ್ಲಿ ಈ ಚಿತ್ರ ಮೂಡಿಬರಲಿದೆ. ನಿರ್ದೇಶನದ ಜತೆ ಕಥೆ-ಚಿತ್ರಕಥೆ ಹಾಗೂ ಸಂಗೀತ ನಿರ್ದೇಶನದ ಜವಾಬ್ದಾರಿಯನ್ನೂ ಖುದ್ದು ಅರ್ಜುನ್​ ಜನ್ಯ ಅವರೇ ಹೊತ್ತಿದ್ದಾರೆ. ಚಿತ್ರೀಕರಣ ಇದೇ ಡಿಸೆಂಬರ್​ನಿಂದ ಪ್ರಾರಂಭವಾಗಲಿದೆ.

ಇನ್ನು, ಸಿನಿಮಾಗಳ ವಿಷಯಕ್ಕೆ ಬರುವುದಾದರೆ ಸದ್ಯ ಉಪೇಂದ್ರ ಆರ್​. ಚಂದ್ರು ನಿರ್ದೇಶನದ "ಕಬ್ಜ' ಚಿತ್ರದ ಬಿಡುಗಡೆಗೆ ಸಿದ್ಧತೆ ನಡೆಸುತ್ತಿದ್ದಾರೆ. ಜತೆಗೆ ಅವರೇ ನಿರ್ದೇಶಿಸಿ, ನಟಿಸುತ್ತಿರುವ "ಯುಐ' ಚಿತ್ರದ ಹೊಸ ಶೆಡ್ಯುಲ್​ನ ಚಿತ್ರೀಕರಣ ಇದೇ ತಿಂಗಳ 10ರಿಂದ ಪ್ರಾರಂಭವಾಗಲಿದೆ. "ತ್ರಿಶೂಲಂ' ಹಾಗೂ "ಬುದ್ಧಿವಂತ 2' ಚಿತ್ರಗಳಲ್ಲೂ ನಟಿಸಿದ್ದು, ಆ ಚಿತ್ರಗಳು ಬಿಡುಗಡೆಯಾಗಬೇಕಿವೆ.

ಹಾಗೆಯೇ, ಶಿವರಾಜ್​ಕುಮಾರ್​ ಸದ್ಯ ಎ. ಹರ್ಷ ನಿರ್ದೇಶನದ "ವೇದ' ಚಿತ್ರದ ಚಿತ್ರೀಕರಣದಲ್ಲಿ ಬಿಜಿಯಾಗಿದ್ದು ಆ ಬಳಿಕ ಎಂ.ಜಿ. ಶ್ರೀನಿ ನಿರ್ದೇಶನದ "ಘೋಸ್ಟ್​', "ಅಶ್ವತ್ಥಾಮ' ಹಾಗೂ ರಜಿನಿಕಾಂತ್​ ನಟಿಸುತ್ತಿರುವ "ಜೈಲರ್​' ಚಿತ್ರದಲ್ಲೂ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net