

ಬೆಂಗಳೂರು: ಹೀಗೂ ಸಿನಿಮಾ ಮಾಡಬಹುದು, ಇಂಥ ವಿಷಯವನ್ನೂ ಜನರಿಗೆ ತೋರಿಸಬಹುದು, ಮಡಿವಂತಿಕೆ ಬದಿಗೆ ಸರಿಸಿ, ಅದರಾಚೆಗೂ ಹೊಸ ಶೈಲಿಯ ಸಿನಿಮಾ ಮಾಡಬಹುದು ಎಂದು ಹೇಳಿಕೊಟ್ಟವರು ನಟ, ನಿರ್ದೇಶಕ, ನಿರ್ಮಾಪಕ, ಬರಹಗಾರ ಕಾಶಿನಾಥ್. ಆದರೆ, ಇದೀಗ ಕಾಶಿನಾಥ್ ಇಲ್ಲದೆ ಎರಡು ವರ್ಷವಾಯ್ತು. ಒಂದು ವೇಳೆ ಬದುಕಿದ್ದಿದ್ದರೆ ಇಂದು ಅವರಿಗೆ ಇಂದು 68 ವರ್ಷ ತುಂಬುತ್ತಿತ್ತು. ಇಂಥ ಸಂದರ್ಭದಲ್ಲಿ ಕನ್ನಡ ಸಿನಿಲೋಕದ ಕಲಾವಿದನನ್ನು ಸ್ಯಾಂಡಲ್ವುಡ್ ಮತ್ತೆ ನೆನಪು ಮಾಡಿಕೊಂಡಿದೆ. ಅವರ 68ನೇ ಜನ್ಮ ದಿನಕ್ಕೆ ಶುಭಕೋರಿದೆ. ಆ ಪೈಕಿ ನಟ ಉಪೇಂದ್ರ ಎರಡೇ ಸಾಲು ಬರೆದುಕೊಂಡರೂ, ಅದರೊಳಗೆ ಬೆಟ್ಟದಷ್ಟು ಭಾವನೆಗಳನ್ನು ತುಂಬಿದ್ದಾರೆ. ಅರಿವು ಮೂಡಿಸಿದ ಗುರುವಿಗೆ ಜನ್ಮ ದಿನದ ಶುಭಾಶಯಗಳು ಎಂದಿದ್ದಾರೆ. ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಕಾಶಿನಾಥ್ ಭಾಗವಹಿಸಿದ ಫೋಟೋವೊಂದನ್ನು ಶೇರ್ ಮಾಡಿಕೊಂಡು ಹ್ಯಾಪಿ ಬರ್ತಡೇ ಎಂದಿದ್ದಾರೆ.
ಇದನ್ನೂ ಓದಿ: ಲಾಕ್ಡೌನ್ನಲ್ಲಿ ಸುದೀಪ್ ಅದೆಷ್ಟು ಬದಲಾಗಿದ್ದಾರೆ …
ಅದೇ ರೀತಿ, ನಿರ್ದೇಶಕ ತರುಣ್ ಸುಧೀರ್ ಚೌಕ ಸಿನಿಮಾದಲ್ಲಿ ಕಾಶಿನಾಥ್ ಪ್ರಧಾನ ಪಾತ್ರವೊಂದನ್ನು ನಿಭಾಯಿಸಿದ್ದರು. ಆವತ್ತು ಕಾಶಿನಾಥ್ ಜತೆಗೆ ಸೀನ್ವೊಂದರ ಬಗ್ಗೆ ಚರ್ಚೆ ನಡೆಸುತ್ತಿದ್ದ ಫೋಟೋವನ್ನು ಶೇರ್ ಮಾಡಿಕೊಂಡ ತರುಣ್, ನಿಮ್ಮ ಜತೆ ಕೆಲಸ ಮಾಡಿದ್ದೇ ನನ್ನ ಪುಣ್ಯ. ನನ್ನ ಜೀವನದ ಅತ್ಯಂತ ಮೆಮೊರೆಬಲ್ ದಿನಗಳಲ್ಲಿ ಒಂದು ಎಂದಿದ್ದಾರೆ.
ಅದೇ ರೀತಿ ಲವ್ಲಿಸ್ಟಾರ್ ನೆನಪಿರಲಿ ಪ್ರೇಮ್ ಸಹ ಚೌಕ ಚಿತ್ರದ ಫೋಟೋ ಹಂಚಿಕೊಂಡಿದ್ದಾರೆ. ನಿಮ್ಮ ಜತೆ ಅಭಿನಯಿಸಿದ ಚೌಕದ ಅನುಭವ ಅನಂತ ಎಂದಿದ್ದಾರೆ. ಹೀಗೆ ಇನ್ನೂ ಹಲವು ಕಲಾವಿದರು, ತಾಂತ್ರಿಕ ವರ್ಗದವರು ಕಾಶಿನಾಥ್ ಅವರನ್ನು ನೆನಪಿಸಿಕೊಂಡಿದ್ದಾರೆ. ಜನ್ಮ ದಿನಕ್ಕೆ ಶುಭಾಶಯ ಕೋರಿದ್ದಾರೆ.