

ಕನ್ನಡ ಚಿತ್ರರಂಗದ ಕುಚಿಕೂ ಗೆಳೆಯರ ಪೈಕಿ ಉಪೇಂದ್ರ ಮತ್ತು ಗುರುಕಿರಣ್ ಸಹ ಸ್ಥಾನ ಪಡೆಯುತ್ತಾರೆ. 'ಎ' ಚಿತ್ರದಲ್ಲಿ ಮೊದಲ ಬಾರಿಗೆ ಜತೆಯಾಗಿ ಕೆಲಸ ಮಾಡಿದ ಇಬ್ಬರೂ, ಅದಕ್ಕೂ ಮುನ್ನ ಕೆಲವು ವರ್ಷಗಳಿಂದ ಸ್ನೇಹಿತರಾಗಿದ್ದವರು ಎಂದು ಎಲ್ಲರಿಗೂ ಗೊತ್ತೇ ಇದೆ.
ಇಂತಹ ಗೆಳೆಯರು ಇತ್ತೀಚೆಗೆ, ಜತೆಯಾಗಿ ಸೈಕಲ್ ರೈಡಿಂಗ್ ಹೋಗಿದ್ದಾರೆ. ಅಷ್ಟೇ ಅಲ್ಲ, ಈ ಸಂದರ್ಭದಲ್ಲಿ ತೆಗೆದ ಫೋಟೋವೊಂದನ್ನು ಗುರುಕಿರಣ್, ತಮ್ಮ ಟ್ವಿಟರ್ ಅಕೌಂಟ್ನಲ್ಲಿ ಹಾಕಿಕೊಂಡಿದ್ದಾರೆ.
ಫೋಟೋ ಶೇರ್ ಮಾಡುವುದರ ಜತೆಗೆ, ಒಂದು ಅದ್ಭುತವಾದ ಕ್ಯಾಪ್ಶನ್ ಸಹ ಕೊಟ್ಟಿದ್ದಾರೆ. 'ಮತ್ತೆ ಸೈಕಲ್ಲು ... ಅಂದು ಗಾಂಧಿನಗರ, ಇಂದು ನಗರದಾಚೆ' ಎಂದು ಅವರು ಬರೆದುಕೊಂಡಿದ್ದಾರೆ.
ಗುರುಕಿರಣ್ ಇಂಥದ್ದೊಂದು ಕ್ಯಾಪ್ಶನ್ ಕೊಡುವುದಕ್ಕೂ ಕಾರಣ ಇದೆ. ಉಪೇಂದ್ರ ಮತ್ತು ಗುರುಕಿರಣ್ ಇಬ್ಬರೂ ಸಾಕಷ್ಟು ಸೈಕಲ್ ಹೊಡೆದು ಚಿತ್ರರಂಗಕ್ಕೆ ಬಂದರು. ಚಿತ್ರರಂಗದ ಭಾಷೆಯಲ್ಲಿ ಸೈಕಲ್ ಹೊಡೆಯುವುದು ಎಂದರೆ, ಸಾಕಷ್ಟು ಹೋರಾಟ ಮಾಡುವುದು ಎಂಬರ್ಥವಿದೆ. ಅದಕ್ಕೆ ಸರಿಯಾಗಿ, ಇಬ್ಬರೂ ಗಾಂಧಿನಗರದಲ್ಲಿ ಸೈಕಲ್ ಹೊಡೆದು, ಕಷ್ಟಪಟ್ಟು ಚಿತ್ರ ಮಾಡಿ, ಯಶಸ್ಸು ನೋಡಿ ... ಇದೀಗ ಈ ಸ್ಥಾನಕ್ಕೆ ಬಂದು ನಿಂತಿದ್ದಾರೆ.
ಇದನ್ನೂ ಓದಿ: ಅಳು ತಡೆಯೋಕೆ ಆಗ್ತಿಲ್ಲವಂತೆ ‘ಬಿಗ್ ಬಿ’ಗೆ …
ಹಾಗೆ ನೋಡಿದರೆ, ಗುರುಕಿರಣ್ ಅವರು ಸಂಗೀತ ನಿರ್ದೇಶಕರಾಗುವ ಮುನ್ನ ಹಲವು ಚಿತ್ರಗಳಲ್ಲಿ ಸಣ್ಣ-ಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಆ ನಂತರ ಅವರ ಸಂಗೀತಾಸಕ್ತಿ ಮತ್ತು ಪ್ರತಿಭೆ ನೋಡಿ, ಅವರನ್ನು 'ಎ' ಚಿತ್ರದ ಮೂಲಕ ಸಂಗೀತ ನಿರ್ದೇಶಕನನ್ನಾಗಿ ಮಾಡಿದ್ದು ಉಪೇಂದ್ರ.
ಹೀಗೆ ಚಿತ್ರರಂಗದಲ್ಲಿ ಒಂದು ಗಟ್ಟಿಸ್ಥಾನ ಪಡೆಯುವುದಕ್ಕೆ ಉಪೇಂದ್ರ ಮತ್ತು ಗುರುಕಿರಣ್ ಸಾಕಷ್ಟು ಸೈಕಲ್ ಹೊಡೆದಿದ್ದು, ಈಗ ಒಳ್ಳೆಯ ಸ್ಥಾನದಲ್ಲಿದ್ದಾರೆ. ಹಾಗಂತ ಸೈಕಲ್ ಮರೆತಿಲ್ಲ. ಇತ್ತೀಚೆಗೆ ಇಬ್ಬರೂ ನಗರದಾಚೆ ಸೈಕಲ್ನಲ್ಲಿ ಒಂದು ರೌಂಡು ಹೋಗಿ ಬಂದಿದ್ದಾರೆ.