'ಉಳಿದವರಾರು' ಮೂಲಕ ಜೀವನ ಅಂದ್ರೆ ಏನು ಅಂತ ಹೇಳೋಕೆ ಹೊರಟಿದ್ದಾರೆ ಹೊಸಬರು

Ulidavaraaru
Published on

ಬೆಂಗಳೂರು: 'ಬಿಜಿನೆಸ್​' ಎಂಬ ಚಿತ್ರವನ್ನು ಮಾಡಿಟ್ಟುಕೊಂಡಿರುವ ಸತೀಶ್​ ಪಾಟೀಲ್​, ಆ ಚಿತ್ರದ ಬಿಡುಗಡೆಗೂ ಮುನ್ನವೇ ಇನ್ನೊಂದು ಹೊಸ ಚಿತ್ರ ಶುರು ಮಾಡಿದ್ದು, ಇತ್ತೀಚೆಗೆ ಅದರ ಮೋಷನ್​ ಪೋಸ್ಟರ್​ ಸಹ ಬಿಡುಗಡೆ ಮಾಡಿದ್ದಾರೆ. ಆ ಚಿತ್ರದ ಹೆಸರೇನು ಗೊತ್ತಾ| 'ಉಳಿದವರಾರು'

'ಉಳಿದವರಾರು' ಚಿತ್ರದಲ್ಲಿ ಬಾಲರಾಜ್ ವಾಡಿ ಮುಖ್ಯ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದು, ನಾಯಕಿಯಾಗಿ ತ್ರಿವೇಣಿ ನಟಿಸುತ್ತಿದ್ದಾರೆ. ಮಿಕ್ಕಂತೆ ವಿಕ್ಟರಿ ವಾಸು, ನಾಗೇಂದ್ರ ಅರಸ್​, ಕೆಂಪೇಗೌಡ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಚಿತ್ರದ ಕುರಿತು ಮಾತನಾಡುವ ಸತೀಶ್​ ಪಾಟೀಲ್​, 'ನಾನು ನಾನು ಅಂತ ಹೊಡೆದಾಡುವ ಜನರ ನಡುವೆ , ಜೀವನ ಅಂದ್ರೆ ಏನು, ಒಂದು ಪ್ರಾಣಕ್ಕೆ ಬೆಲೆ ಏನು ಎಂದು ಹೇಳುವ ಪ್ರಯತ್ನವನ್ನು ಈ ಚಿತ್ರದಲ್ಲಿ ಮಾಡುತ್ತಿದ್ದೇವೆ. ಇದೊಂದು ರಿವೆಂಜ್ ಸ್ಟೋರಿ. ಇದೊಂದು ನಾಯಕಿ ಪ್ರಧಾನ ಚಿತ್ರವಾಗಿದ್ದು, ಇಲ್ಲಿ ದುಡ್ಡಿನ ದರ್ಪ ತೋರುತ್ತಾ, ನಾನೇ ನಂಬರ್ ಒನ್ ಆಗ್ಬೇಕು ಅನ್ನೋ ವ್ಯಕ್ತಿಗೆ ನಾಯಕಿ ಹೇಗೆ ಪಾಠ ಕಲಿಸುತ್ತಾಳೆ ಎಂಬುದು ಚಿತ್ರದ ಕಥೆ. ಶ್ರೀಮಂತಿಕೆಯ ಮದದಲ್ಲಿರುವ ನರರಾಕ್ಷಸರ ಕೋಟೆಯನ್ನು ಭೇದಿಸುವ ನಾಯಕಿ ಏನೆಲ್ಲಾ ಕಷ್ಟ ಪಡುತ್ತಾಳೆ ಹಾಗೂ ದುಷ್ಟರಿಗೆ ಜೀವದ ಬೆಲೆ ಏನು ಎಂಬುದನ್ನು ಹೇಗೆ ತಿಳಿಸುತ್ತಾಳೆ ಎಂಬುದೇ ಚಿತ್ರದ ಕಥೆ' ಎನ್ನುತ್ತಾರೆ ಪಾಟೀಲ್​.

ಡಿ. 25ರಿಂದ ಚಿತ್ರೀಕರಣ ಪ್ರಾರಂಭವಾಗಲಿದ್ದು, ಚಿಕ್ಕಮಗಳೂರು, ಹಾಸನ, ಸಕಲೇಶಪುರ ಮುಂತಾದ ಕಡೆ ಒಂದೇ ಹಂತದ ಚಿತ್ರೀಕರಣ ನಡೆಯಲಿದೆಯಂತೆ. ಚಿತ್ರಕ್ಕೆ ಮಸ್ತಾನ್ ಶರೀಫ್ ಛಾಯಾಗ್ರಹಣ ಮತ್ತು ಗಂಧರ್ವ ಅವರ ಸಂಗೀತವಿದೆ. ನೇಸರ ಪ್ರೊಡಕ್ಷನ್ಸ್​ನಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದೆ.

'ಉಳಿದವರಾರು' ಚಿತ್ರದ ಪೋಸ್ಟರ್ ಜೇಮ್ಸ್ ಬಾಂಡ್ ರೀತಿ ಇದೆ ಎನ್ನುವ ಬಾಲರಾಜ್​ ವಾಡಿ, 'ಈ ಚಿತ್ರದಲ್ಲಿ ನನ್ನದು ಒಬ್ಬ ದೊಡ್ಡ ಬ್ಯುಸಿನೆಸ್​ಮ್ಯಾನ್ ಪಾತ್ರ. ಅವನು ನಂಬರ್​ ಒನ್​ ಸ್ಥಾನವನ್ನು ಉಳಿಸಿಕೊಳ್ಳಲು ಏನೆಲ್ಲ ಹೊರಟ ಮಾಡುತ್ತಾನೆ ಎಂಬುದನ್ನು ಚಿತ್ರದಲ್ಲಿ ತೋರಿಸಲಾಗಿದೆ' ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net