ಮಮ್ಮಿಗೆ ಹಾಡಿನ ಮೂಲಕ ಲವ್​ ಕನ್ವಿನ್ಸ್ ಮಾಡಿದ ತ್ರಿವಿಕ್ರಮ!

WhatsApp Image 2020-11-17 at 4.26.56 PM
Published on

ಬೆಂಗಳೂರು: ರವಿಚಂದ್ರನ್ ಪುತ್ರ ವಿಕ್ರಮ್ ರವಿಚಂದ್ರನ್ ನಾಯಕರಾಗಿ ನಟಿಸುತ್ತಿರುವ‌ ಚಿತ್ರ ತ್ರಿವಿಕ್ರಮ. ಪ್ರಸ್ತುತ ಈ ಚಿತ್ರದ ಬಹುತೇಕ ಚಿತ್ರೀಕರಣ ಮುಕ್ತಾಯವಾಗಿದ್ದು, ಎರಡು ಹಾಡುಗಳ ಚಿತ್ರೀಕರಣ ಬಾಕಿಯಿದೆ. ದೀಪಾವಳಿ ಹಬ್ಬಕ್ಕೆ ತ್ರಿವಿಕ್ರಮ ಚಿತ್ರದ ಮಮ್ಮಿ ಪ್ಲೀಸ್ ಮಮ್ಮಿ ಹಾಡು A2 music ಮೂಲಕ ಬಿಡುಗಡೆಯಾಗಿತ್ತು. ಬಿಡುಗಡೆಯಾದ ಮೂರು ದಿನಗಳಲ್ಲಿ 7 ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ಈ ಹಾಡು ವೀಕ್ಷಣೆಯಾಗಿದೆ.

ಸಾಮಾನ್ಯವಾಗಿ ಅಮ್ಮ- ಮಗನಿಗೆ ಸಂಬಂಧಿಸಿದಂತೆ ಸೆಂಟಿಮೆಂಟ್ ಹಾಡುಗಳನ್ನು ಈಗಾಗಲೇ ಕೇಳಿದ್ದೇವೆ. ಇದೀಗ ಅದಕ್ಕೆ ವಿಭಿನ್ನ ಶೈಲಿಯ ಟ್ಯೂನ್​ ಟಚ್​ ಕೊಟ್ಟು, ಮಗ‌ ತನ್ನ ಪ್ರೀತಿಯ ಬಗ್ಗೆ ತಾಯಿಯ ಬಳಿ ವಿನೂತನ ಶೈಲಿಯಲ್ಲಿ ಹೇಳಿಕೊಳ್ಳುವ ಈ ಹಾಡಿಗೆ ಅಪಾರ ಮೆಚ್ಚುಗೆ ದೊರಕಿದೆ. ಡಾ. ವಿ.ನಾಗೇಂದ್ರ ಪ್ರಸಾದ್ ಬರೆದಿರುವ ಈ ಹಾಡನ್ನು ವಿಜಯ್ ಪ್ರಕಾಶ್ ಹಾಡಿದ್ದಾರೆ. ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ.

ಗೌರಿ ಎಂಟರ್ ಟೈನರ್‌ ಲಾಂಛನದಲ್ಲಿ ಸೋಮಣ್ಣ ಅವರು‌ ನಿರ್ಮಿಸುತ್ತಿರುವ ಈ ಚಿತ್ರವನ್ನು ಸಹನಾ‌ ಮೂರ್ತಿ‌‌ ನಿರ್ದೇಶನ ಮಾಡಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆ ಕೂಡ ಸಹನಾ ಮೂರ್ತಿ ಅವರದ್ದೇ. ಸಂತೋಷ್ ರೈ ಪಾತಾಜೆ, ಗುರು ಪ್ರಶಾಂತ್ ರೈ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ ತ್ರಿವಿಕ್ರಮ ಚಿತ್ರಕ್ಕಿದೆ.

ವಿಕ್ರಮ್ ರವಿಚಂದ್ರನ್ ಅವರಿಗೆ ಅಕಾಂಕ್ಷ ಶರ್ಮ ನಾಯಕಿಯಾಗಿದ್ದಾರೆ. ತುಳಸಿ ಶಿವಮಣಿ, ಸುಚೇಂದ್ರ ಪ್ರಸಾದ್, ಸಾಧುಕೋಕಿಲ, ಚಿಕ್ಕಣ್ಣ, ರೋಹಿತ್ ರಾಯ್, ಆದಿಲೋಕೇಶ್, ಶಿವಮಣಿ, ಅಕ್ಷರ ಗೌಡ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಹಾಡು ಹಾಗೂ ಟ್ರೇಲರ್ ಮೂಲಕ ‌ಸಾಕಷ್ಟು ಟ್ರೆಂಡ್ ಹುಟ್ಟಹಾಕಿರುವ ಈ ಚಿತ್ರ ಮುಂದಿನ ವರ್ಷದ ವೇಳೆಗೆ ಬಿಡುಗಡೆ ಆಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net