ಮದುವೆಯಾಗದೇ ಮಗು ಮಾಡಿಕೊಳ್ಳಲು ಖ್ಯಾತ ನಟಿ ಮೆಹ್ರೀನ್ ಫಿರ್ಜಾದಾ ಏನ್​ ಮಾಡಿದ್ರು ನೋಡಿ!

Egg Freezing
Published on

ಹೈದರಾಬಾದ್​: ಇತ್ತೀಚಿನ ದಿನಗಳಲ್ಲಿ ಅನೇಕ ನಟಿಯರು ತಮ್ಮ ವೈಯಕ್ತಿಕ ಜೀವನಕ್ಕಿಂತ ವೃತ್ತಿಜೀವನದ ಮೇಲೆ ಹೆಚ್ಚು ಗಮನ ಹರಿಸುತ್ತಿದ್ದಾರೆ. ವಯಸ್ಸಿಗೆ ಬಂದರೂ ಮದುವೆಯಾಗಲು ನಿರಾಕರಿಸುತ್ತಿದ್ದಾರೆ. ತಮ್ಮ ವೃತ್ತಿಜೀವನವು ಉತ್ತಮ ಸ್ಥಿತಿಯಲ್ಲಿರುವುದರಿಂದ ಕೆಲವರು ಮದುವೆ ಆಲೋಚನೆಗಳಿಂದ ದೂರವಿರುತ್ತಾರೆ. ಆದರೆ, ಇತ್ತೀಚೆಗೆ ಕೆಲವು ತಾರೆಯರು ಮದುವೆಯಾಗಿ ಮಕ್ಕಳನ್ನು ಹೊಂದುತ್ತಿದ್ದಾರೆ. ಆದರೆ, ಕೆಲವರು ಮಕ್ಕಳನ್ನು ಹೊಂದುವ ಸಲುವಾಗಿ ಎಗ್ ಫ್ರೀಜಿಂಗ್ ವಿಧಾನವನ್ನು ಆರಿಸಿಕೊಳ್ಳುತ್ತಿದ್ದಾರೆ. ಏಕೆಂದರೆ, ಬಯಸಿದಾಗ ಮಕ್ಕಳನ್ನು ಹೊಂದಲು ಇದು ಅನುಕೂಲಕರವಾಗಿದೆ. ಅದರಲ್ಲೂ ಸಿನಿಮಾ ತಾರೆಯರಿಗೆ ಎಗ್​ ಫ್ರೀಜಿಂಗ್​ ಉತ್ತಮ ಆಯ್ಕೆಯಾಗಿದೆ. ಈಗಾಗಲೇ ಇಂಡಸ್ಟ್ರಿಯಲ್ಲಿ ಹಲವು ನಟಿಯರು ಎಗ್​ ಫ್ರೀಜಿಂಗ್​ಗೆ ಒಳಗಾಗಿದ್ದಾರೆ. ಈಗ ಈ ಪಟ್ಟಿಗೆ ಮತ್ತೊಬ್ಬ ಸ್ಟಾರ್ ಹೀರೋಯಿನ್ ಸೇರಿಕೊಂಡಿದ್ದಾರೆ.

ಟಾಲಿವುಡ್ ಸ್ಟಾರ್ ಹೀರೋಯಿನ್ 'ಮೆಹ್ರೀನ್ ಫಿರ್ಜಾದಾ' ಬಗ್ಗೆ ವಿಶೇಷವಾಗಿ ಹೇಳಬೇಕಾಗಿಲ್ಲ. ತನ್ನ ಮೊದಲ ಚಿತ್ರದಲ್ಲೇ ತನ್ನ ಸೌಂದರ್ಯ ಮತ್ತು ಅತ್ಯುತ್ತಮ ನಟನೆಯಿಂದ ಇಂಡಸ್ಟ್ರಿಯಲ್ಲಿ ಎಲ್ಲರ ಗಮನ ಸೆಳೆದಿದ್ದಾರೆ. ಸಾಲು ಸಾಲು ಹಿಟ್​ ಚಿತ್ರಗಳೊಂದಿಗೆ ಒಳ್ಳೆಯ ಫ್ಯಾನ್ ಫಾಲೋಯಿಂಗ್ ಕೂಡ ಸಂಪಾದಿಸಿದ್ದಾರೆ. ಆದರೆ, ಸಿನಿಮಾ ವೃತ್ತಿ ಜೀವನದಲ್ಲಿ ಉತ್ತುಂಗದಲ್ಲಿರುವಾಗಲೇ ಎಂಗೇಜ್​ಮೆಂಟ್ ಮಾಡಿಕೊಂಡು ಅಭಿಮಾನಿಗಳಿಗೆ ಶಾಕ್ ನೀಡಿದರು. ಆದರೆ, ಅದೇನಾಯಿತೋ ಗೊತ್ತಿಲ್ಲ, ಮಧ್ಯದಲ್ಲಿ ಎಂಗೇಜ್​ಮೆಂಟ್ ಮುರಿದುಕೊಳ್ಳುತ್ತಿರುವುದಾಗಿ ಘೋಷಿಸಿ, ಮತ್ತೆ ಸಿನಿಮಾಗಳತ್ತ ಗಮನ ಹರಿಸಿದ್ದಾರೆ. ಇದೇ ಸಂದರ್ಭದಲ್ಲಿ ಮೆಹ್ರೀನ್ ಇತ್ತೀಚೆಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಆಸಕ್ತಿದಾಯಕ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ.

ಮೆಹ್ರೀನ್ ಫಿರ್ಜಾದಾ ಅವರು ಎಗ್​ ಫ್ರೀಜಿಂಗ್​ ಒಳಗಾಗಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋವನ್ನು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. 'ನನ್ನ ಎಗ್​ ಫ್ರೀಜಿಂಗ್​ ಜರ್ನಿ' ಎಂದು ಶೀರ್ಷಿಕೆ ನೀಡಿದ್ದಾರೆ. ಆದರೆ ಈ ಎಗ್​ ಫ್ರೀಜಿಂಗ್​ ಬಗ್ಗೆ ನಾನು ನಿರ್ಧಾರ ತೆಗೆದುಕೊಳ್ಳಲು 2 ವರ್ಷಗಳು ಬೇಕಾಯಿತು. ಕೊನೆಗೂ ಈ ಎಗ್ ಫ್ರೀಜಿಂಗ್ ಮುಗಿಸಿದ್ದಕ್ಕೆ ನನಗೆ ತುಂಬಾ ಖುಷಿಯಾಗಿದೆ ಎಂದಿದ್ದಾರೆ ಮೆಹ್ರೀನ್. ಇದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್ ಆಗಿದೆ. ಈ ಎಗ್ ಫ್ರೀಜಿಂಗ್​ಗಾಗಿ ಮೆಹ್ರೀನ್ ಎಷ್ಟು ಕಷ್ಟಪಟ್ಟಿದ್ದಾರೆ ಎಂಬುದು ವಿಡಿಯೋ ನೋಡಿದ ಮೇಲೆಯೇ ಅರ್ಥವಾಗುತ್ತದೆ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.

ನಾನು ವೈಯಕ್ತಿಕವಾಗಿ ಏನನ್ನಾದರೂ ಹಂಚಿಕೊಳ್ಳಬೇಕೇ ಅಥವಾ ಬೇಡವೇ ಎಂದು ತುಂಬಾ ಯೋಚಿಸುತ್ತಿದ್ದೆ. ಆದರೆ ಯಾವಾಗ ಮದುವೆಯಾಗಬೇಕು ಅಥವಾ ಮಗುವನ್ನು ಹೊಂದಬೇಕು ಎಂದು ಇನ್ನೂ ನಿರ್ಧರಿಸದ ನನ್ನಂತಹ ಅನೇಕ ಮಹಿಳೆಯರಿದ್ದಾರೆ ಮತ್ತು ಭವಿಷ್ಯಕ್ಕಾಗಿ ನಮ್ಮನ್ನು ರಕ್ಷಿಸಿಕೊಳ್ಳುವುದು ಬಹಳ ಮುಖ್ಯ ಎಂದು ನಾನು ಭಾವಿಸಿದ್ದೇ. ಭವಿಷ್ಯದಲ್ಲಿ ತೊಡಕುಗಳನ್ನು ತಪ್ಪಿಸಲು ಎಲ್ಲ ಮಹಿಳೆಯರು ಮಗುವನ್ನು ಹೊಂದಬೇಕು ಎಂದು ನಾನು ಭಾವಿಸುತ್ತೇನೆ. ಎಗ್​ ಫ್ರೀಜಿಂಗ್​ ಒಂದು ಟಬೂ ಟಾಪಿಕ್​ ಎಂದು ಪರಿಗಣಿಸಲ್ಪಟ್ಟಿರುವುದರಿಂದ ನಾವು ಇದರ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ. ಇಂದು ತಂತ್ರಜ್ಞಾನದ ಸಹಾಯದಿಂದ ನಾವು ನಮಗಾಗಿ ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಮರ್ಥರಾಗಿದ್ದೇವೆ. ಆದ್ದರಿಂದ ನಾವೇಕೆ ಇದನ್ನು ಮಾಡಬಾರದು? ತಾಯಿಯಾಗುವುದು ನನ್ನ ಕನಸು. ಆದ್ದರಿಂದ ಈ ಎಗ್​ ಫ್ರೀಜಿಂಗ್​ ಮಾಡಿಕೊಂಡೆ. ಈ ಪ್ರಕ್ರಿಯೆಯಲ್ಲಿ ಯಾವಾಗಲೂ ನನ್ನ ಬೆಂಬಲಕ್ಕೆ ನಿಂತ ನನ್ನ ಸ್ತ್ರೀರೋಗತಜ್ಞ ಡಾ. ರಿಮ್ಮಿ ಮತ್ತು ನನ್ನ ತಾಯಿಗೆ ಧನ್ಯವಾದಗಳು ಎಂದು ಮೆಹ್ರೀನ್ ಫಿರ್ಜಾದಾ ಹೇಳಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net