

Tollywood : ಚಿತ್ರರಂಗದಲ್ಲಿ ಪ್ಯಾನ್ ಇಂಡಿಯಾ ಪರಿಕಲ್ಪನೆಯ ಬಳಿಕ ಕೆಲ ಸಿನಿಮಾಗಳು ಬಾಕ್ಸ್ ಆಫೀಸ್ನಲ್ಲಿ ಸುಲಭವಾಗಿ 1000 ಕೋಟಿ ರೂ. ಗಳಿಕೆ ಮಾಡುತ್ತಿವೆ. ಇತ್ತೀಚೆಗೆ ಬಿಡಗಡೆಯಾದ ಅಲ್ಲು ಅರ್ಜುನ್ ನಟನೆಯ ಪುಷ್ಪ-2 ಕೂಡ 1500 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿದೆ ಎನ್ನಲಾಗುತ್ತಿದೆ. ಇಷ್ಟೊಂದು ಕಲೆಕ್ಷನ್ ಹಣದಲ್ಲಿ ಚಿತ್ರದ ನಿರ್ಮಾಪಕರಿಗೆ ಎಷ್ಟು ಸಿಗುತ್ತದೆ ಎಂಬ ಕುತೂಹಲ ಸಹಜವಾಗಿಯೇ ಎಲ್ಲರಲ್ಲೂ ಇರುತ್ತದೆ. ಇದೀಗ ಆ ಕುತೂಹಲ ತಣಿಸುವ ಉತ್ತರವನ್ನು ಟಾಲಿವುಡ್ ನಿರ್ಮಾಪಕರೊಬ್ಬರು ನೀಡಿದ್ದಾರೆ. ಆದರೆ, ಅಲ್ಲೊಂದು ಅಚ್ಚರಿಯೂ ಇದೆ.
ಟಾಲಿವುಡ್ ಖ್ಯಾತ ನಿರ್ಮಾಪಕ ಬನ್ನಿ ವಾಸು ಅವರು ಇದೇ ವಿಚಾರವಾಗಿ ಇತ್ತೀಚೆಗೆ ಮಾಧ್ಯಮ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. ಅವರು ಹೇಳುವಂತೆ ಒಂದು ಸಿನಿಮಾ 1000 ಕೋಟಿ ಗಳಿಸಿದರೆ, ನಿರ್ಮಾಪಕನಿಗೆ ಕೇವಲ 400 ಕೋಟಿ ರೂ. ಮಾತ್ರ ಸಿಗುತ್ತದೆಯಂತೆ.
ಅಂದಹಾಗೆ ಥಂಡೇಲ್ ಚಿತ್ರದಲ್ಲಿ ನಾಗಚೈತನ್ಯ ಮತ್ತು ಸಾಯಿ ಪಲ್ಲವಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರವನ್ನು ಗೀತಾ ಆರ್ಟ್ಸ್ 2 ಬ್ಯಾನರ್ ಅಡಿಯಲ್ಲಿ ಬನ್ನಿ ವಾಸು ನಿರ್ಮಿಸಿದ್ದಾರೆ. ಚಂದು ಮೊಂಡೆಟಿ ಅವರು ನಿರ್ದೇಶನ ಮಾಡಿದ್ದು, ಈ ಸಿನಿಮಾ ಫೆಬ್ರವರಿ 7ರಂದು ತೆಲುಗು, ತಮಿಳು ಮತ್ತು ಹಿಂದಿ ಭಾಷೆಗಳಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗಲಿದೆ. ಇದೇ ಸಂದರ್ಭದಲ್ಲಿ, ನಿರ್ಮಾಪಕ ಬನ್ನಿ ವಾಸು ಸತತವಾಗಿ ಸಂದರ್ಶನಗಳನ್ನು ನೀಡುತ್ತಿದ್ದಾರೆ.
ಇತ್ತೀಚೆಗೆ ತೆಲುಗಿನ ಎನ್ಟಿವಿ ಮಾಧ್ಯಮಕ್ಕೆ ವಿಶೇಷ ಸಂದರ್ಶನ ನೀಡಿದರು. ಈ ವೇಳೆ ಮಾತನಾಡಿದ ಅವರು, ಕಲೆಕ್ಷನ್ ವಿಚಾರಕ್ಕೆ ಬಂದಾಗ ಸಂಪೂರ್ಣ ನಿರ್ಮಾಪಕರಿಗೆ ಹಣ ಹೋಗುತ್ತದೆ ಎಂದು ಎಲ್ಲರೂ ಭಾವಿಸಿದ್ದಾರೆ. ಆದರೆ, ಅದು ನಿಜವಲ್ಲ. ಒಂದು ಚಿತ್ರ 1,000 ಕೋಟಿ ರೂ. ಕಲೆಕ್ಷನ್ ಮಾಡಿದರೆ, ಕೇವಲ 400 ಕೋಟಿ ರೂ. ಮಾತ್ರ ನಿರ್ಮಾಪಕರಿಗೆ ಹೋಗುತ್ತದೆ ಮತ್ತು ಉಳಿದದ್ದು ತೆರಿಗೆಗಳ ಮೂಲಕ ಥಿಯೇಟರ್ ಮಾಲೀಕರು, ವಿತರಕರು ಮತ್ತು ಸರ್ಕಾರಕ್ಕೆ ಹೋಗುತ್ತದೆ ಎಂದು ಹೇಳಿದರು.
ಪ್ರಸ್ತುತ ಪರಿಸ್ಥಿತಿಯಲ್ಲಿ ಪ್ರತಿ ನೂರು ರೂಪಾಯಿಗೆ ಪ್ರತಿ ಮಲ್ಟಿಪ್ಲೆಕ್ಸ್ನಲ್ಲಿ 34 ರೂ.ಗಿಂತ ಕಡಿಮೆ ಹಣ ಸಿಗುತ್ತದೆ. ಸಿಂಗಲ್ ಥಿಯೇಟರ್ಗಳು ಕಡಿಮೆಯಾಗುತ್ತಿವೆ. ಕೆಲವು ಸ್ಥಳಗಳಲ್ಲಿ ಥಿಯೇಟರ್ಗಳನ್ನು ಮುಚ್ಚಲಾಗುತ್ತಿದೆ. ಮಲ್ಟಿಪ್ಲೆಕ್ಸ್ ಸಂಸ್ಕೃತಿ ಹೆಚ್ಚುತ್ತಿದೆ. ಮಲ್ಟಿಪ್ಲೆಕ್ಸ್ಗಳಲ್ಲಿ ನಮಗೆ ಹೆಚ್ಚಿನ ಲಾಭಾಂಶ ಉಳಿದಿಲ್ಲ ಎಂದು ಅವರು ಬನ್ನಿ ವಾಸು ಹೇಳಿದರು. (ಏಜೆನ್ಸೀಸ್)