

ಹೈದರಾಬಾದ್: ಆಮೀರ್ ಖಾನ್ ಅಭಿನಯದ "ಲಾಲ್ ಸಿಂಗ್ ಛಡ್ಡಾ' ಚಿತ್ರದ ಬಿಡುಗಡೆಗೆ ಇನ್ನೊಂದು ತಿಂಗಳು ಸಹ ಇಲ್ಲ. ಆಗಸ್ಟ್ 11ಕ್ಕೆ ಚಿತ್ರವು ಜಗತ್ತಿನಾದ್ಯಂತ ಬಿಡುಗಡೆಯಾಗುತ್ತಿದೆ. ಸದ್ಯದಲ್ಲೇ ಚಿತ್ರದ ಪ್ರಚಾರ ಪ್ರಾರಂಭಿಸುವುದಕ್ಕೆ ಆಮೀರ್ ಖಾನ್ ತಯಾರಿ ನಡೆಸಿದ್ದು, ಮೊದಲ ಹಂತವಾಗಿ ಚಿತ್ರವನ್ನು ಟಾಲಿವುಡ್ನ ಜನಪ್ರಿಯ ನಟರು ಮತ್ತು ತಂತ್ರಜ್ಞರಿಗೆ ತೋರಿಸಿದ್ದಾರೆ. ಅಷ್ಟೇ ಅಲ್ಲ, ಅವರಿಂದ ಮೆಚ್ಚುಗೆಯನ್ನು ಪಡೆದಿದ್ದಾರೆ.
ಕೆಲವು ವರ್ಷಗಳ ಹಿಂದೆ ಕ್ಯೋಟೋ ಏರ್ಪೋರ್ಟ್ನಲ್ಲಿ ಚಿರಂಜೀವಿ ಮತ್ತು ಆಮೀರ್ ಖಾನ್ ಭೇಟಿಯಾಗಿದ್ದರಂತೆ. ಹೀಗೆ ಶುರುವಾದ ಅವರಿಬ್ಬರ ಸ್ನೇಹ, ಈಗ "ಲಾಲ್ ಸಿಂಗ್ ಛಡ್ಡಾ'ದ ತೆಲುಗು ಅವತರಣಿಕೆಯನ್ನು ಚಿರಂಜೀವಿ ಅರ್ಪಿಸುವವರೆಗೂ ಮುಂದುವರೆದಿದೆ. ಚಿರಂಜೀವಿ ತೆಲುಗು ಅವತರಣಿಕೆಯನ್ನು ಅರ್ಪಿಸುತ್ತಿರುವುದರಿಂದ ಇತ್ತೀಚೆಗೆ ಹೈದರಾಬಾದ್ನ ಅವರ ಮನೆಯಲ್ಲೇ ಚಿತ್ರದ ವಿಶೇಷ ಪ್ರದರ್ಶನ ಇಟ್ಟುಕೊಂಡಿದ್ದರು ಆಮೀರ್.
ಈ ಪ್ರದರ್ಶನದಲ್ಲಿ ಚಿರಂಜೀವಿ ಜತೆಗೆ ನಾಗಾರ್ಜುನ, ನಾಗ ಚೈತನ್ಯ, ರಾಮ್ಚರಣ್ ತೇಜ, ನಿರ್ದೇಶಕರಾದ ಎಸ್.ಎಸ್. ರಾಜಮೌಳಿ ಮತ್ತು ಸುಕುಮಾರ್ ಹಾಜರಿದ್ದರು. ಚಿತ್ರವನ್ನು ಚಿರಂಜೀವಿ ಮೆಚ್ಚಿಕೊಂಡಿದ್ದಷ್ಟೇ ಅಲ್ಲ, ಆಮೀರ್ ಅವರನ್ನು ತಬ್ಬಿಕೊಂಡು ತಮ್ಮ ಹರ್ಷ ವ್ಯಕ್ತಪಡಿಸಿದ್ದಾರೆ. ಚಿರಂಜೀವಿ ಅವರ ಮೆಚ್ಚುಗೆಯಿಂದ ಖುಷಿಯಾಗಿ ಆಮೀರ್ ಆನಂದಭಾಷ್ಪ ಸುರಿಸಿದ್ದಾರೆ. ಈ ಸಂದರ್ಭದಲ್ಲಿ ವಿಡಿಯೋವೊಂದನ್ನು ಚಿರಂಜೀವಿ ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದು, ಒಂದೊಳ್ಳೆಯ ಚಿತ್ರ ಮಾಡಿದ್ದಕ್ಕೆ ಆಮೀರ್ಗೆ ಶುಭಾಶಯಗಳನ್ನು ತಿಳಿಸಿದ್ದಾರೆ.