

ಬೆಂಗಳೂರು: 'ಕೃಷ್ಣ ಲೀಲಾ' ನಂತರ ಅಜೇಯ್ ರಾವ್ ನಿರ್ಮಾಣದಲ್ಲಿ ತೊಡಗಿಸಿಕೊಂಡಿರಲಿಲ್ಲ. ಒಂದೇ ಚಿತ್ರದ ನಿರ್ಮಾಣಕ್ಕೆ ಅವರು ಸುಸ್ತಾಗಿ ಹೋದರಾ ಎಂಬ ಪ್ರಶ್ನೆ ಬರುವಾಗಲೇ, ಅವರು ಪವನ್ ಭಟ್ ನಿರ್ದೇಶನದ ಒಂದು ಚಿತ್ರವನ್ನು ನಿರ್ಮಿಸುತ್ತಿರುವುದಾಗಿ ಸುದ್ದಿಯಾಗಿತ್ತು. ಈ ಚಿತ್ರದಲ್ಲಿ ಅವರೇ ನಟಿಸುತ್ತಿದ್ದಾರೆ ಎಂದು ಹೇಳಲಾಗಿತ್ತು.
ಈಗ ಅದು ಅಧಿಕೃತವಾಗಿದೆ. ಅಜೇಯ್ ರಾವ್ ನಿರ್ಮಾಣದ ಎರಡನೇ ಚಿತ್ರದ ಮೊದಲ ಪೋಸ್ಟರ್ ಇಂದು ಬಿಡುಗಡೆಯಾಗಿದ್ದು, ಚಿತ್ರದ ಟೈಟಲ್ ಏನಿರಬಹುದು ಎಂದು ನವೆಂಬರ್ 25ಕ್ಕೆ ಗೊತ್ತಾಗಲಿದೆ. ಅಂದು ಟೈಟಲ್ ಟೀಸರ್ ಬಿಡುಗಡೆ ಮಾಡುವ ಮೂಲಕ ಅಜೇಯ್ ತಮ್ಮ ಹೊಸ ಚಿತ್ರದ ಟೈಟಲ್ ಏನು ಎಂದು ಹೇಳಲಿದ್ದಾರೆ.
ಈ ಚಿತ್ರದ ಮೊದಲ ಪೋಸ್ಟರ್ ನೋಡಿದರೆ, ಇದರಲ್ಲಿ ಅಜೇಯ್ ಲಾಯರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಹಾಗೆ ಕಾಣುತ್ತದೆ. ಕರಿ ಕೋಟು ತೊಟ್ಟು ಟೇಬಲ್ಗೆ ಅಜೇಯ್ ಒರಗಿ ನಿಂತಿದ್ದು, ಹಿಂದೆ ಕ್ಯಾಲೆಂಡರ್ನಲ್ಲಿ ಮಾರ್ಚ್ 2023 ಎಂದು ನಮೂದಿಸಲಾಗಿದೆ. ಈಗಾಗಲೇ ಚಿತ್ರದ ಚಿತ್ರೀಕರಣ ಪ್ರಾರಂಭವಾಗಿದ್ದು, ಬಹುಶಃ 2023ರ ಮಾರ್ಚ್ನಲ್ಲಿ ಚಿತ್ರ ಅಧಿಕೃತವಾಗಿ ಬಿಡುಗಡೆಯಾಗಲಿದೆ.
ಪವನ್ ಭಟ್ ಬರೆದು ನಿರ್ದೇಶನ ಮಾಡುತ್ತಿರುವ ಈ ಚಿತ್ರಕ್ಕೆ ಕೆ.ಬಿ. ಪ್ರವೀಣ್ ಅವರ ಸಂಗೀತ ಮತ್ತು ಕಾರ್ತಿಕ್ ಶರ್ಮ ಅವರ ಛಾಯಾಗ್ರಹಣವಿದೆ. ಯೂಟ್ಯೂಬ್ನ ಎ2 ಮ್ಯೂಸಿಕ್ ಚಾನಲ್ನಲ್ಲಿ ಟೀಸರ್ ಬಿಡುಡೆಯಾಗಲಿದೆ.
ಇತ್ತೀಚೆಗೆ ಬಿಡುಗಡೆಯಾಗಿದ್ದ 'ದಿಲ್ ಪಸಂದ್' ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಅಜೇಯ್ ರಾವ್, 'ಬ್ಯಾಂಕ್ ಆಫ್ ಭಾಗ್ಯಲಕ್ಷ್ಮೀ' ಎಂಬ ಚಿತ್ರದಲ್ಲೂ ನಾಯಕನಾಗಿ ಕಾಣಿಸಿಕಳ್ಳುತ್ತಿದ್ದಾರೆ.