ಸಲಗ ಪ್ರಮೋಷನ್​ ಸಾಂಗ್​ನಲ್ಲಿ ಟಿಣಿಂಗ ಮಿಣಿಂಗ ಟಿಶ್ಶಾ

Salaga Viji
Published on

ಬೆಂಗಳೂರು: ‘ಬೆಂಗಳೂರ್ ಸಾಹುಕಾರ್ ಮಾಲೀಕ್ ಮುಜೆ ಅಂದರ್ ಬುಲಾಯಾ ... ದರ್ವಾಜ ಲಗಾಯಾ ... ಅಂದರ್ ಮಂಜೋ ಕೋ ಕೋ ... ಟಿಣಿಂಗ ಮಿಣಿಂಗ ಟಿಶ್ಯಾ ...’ ಕಳೆದ ಎರಡು ದಿನಗಳಿಂದ ಈ ‘ಟಿಣಿಂಗ ಮಿಣಿಂಗ ಟಿಶ್ಯಾ ...’ ಎಂಬ ಪದಗಳೂ ಬಹಳ ಜನಪ್ರಿಯವಾಗಿಬಿಟ್ಟಿದೆ. ಅದಕ್ಕೆ ಕಾರಣ ‘ಸಲಗ’. ಆಗಸ್ಟ್ 20ಕ್ಕೆ ಬಿಡುಗಡೆಯಾಗಬೇಕಿರುವ ‘ಸಲಗ’ ಚಿತ್ರದ ಪ್ರೊಮೋಷನಲ್ ಹಾಡೊಂದನ್ನು ಬಿಡುಗಡೆ ಮಾಡುವುದಾಗಿ ಚಿತ್ರತಂಡ ಕಳೆದ ವಾರವೇ ಹೇಳಿಕೊಂಡಿತ್ತು. ಅದರಂತೆ ‘ಟಿಣಿಂಗ ಮಿಣಿಂಗ ಟಿಶ್ಯಾ ...’ ಎಂಬ ಪ್ರಮೋಷನಲ್ ಹಾಡನ್ನು ಗುರುವಾರ ಬಿಡುಗಡೆ ಮಾಡಿದೆ. ಈ ಹಾಡು ಸಾಕಷ್ಟು ಜನಪ್ರಿಯವಾಗಿದ್ದು, ಯೂಟ್ಯೂಬ್​ನಲ್ಲಿ ಒಂದೂವರೆ ಮಿಲಿಯನ್ ವೀಕ್ಷಣೆ ಪಡೆದಿದೆ.

ಈ ಹಾಡಿನ ಬಗ್ಗೆ ಮಾತನಾಡಿರುವ ವಿಜಯ್, ‘ಚಿತ್ರದ ಒಂದು ಹಂತದ ಚಿತ್ರೀಕರಣ ಮುಗಿಸಿ, ಯಲ್ಲಾಪುರದ ಚನ್ನಕೇಶವ ಅವರ ಮನೆಗೆ ಹೋಗಿದ್ದೆ. ಕಾಡಿನ ಮಧ್ಯೆ ಅವರ ಮನೆ. ಆ ಸಂದರ್ಭದಲ್ಲಿ ಸಿದ್ದಿ ಜನಾಂಗದ ಹಾಡು ಕೇಳಿದೆ. ಆಗಲೇ ಅದನ್ನು ರೆಕಾರ್ಡ್ ಮಾಡಿಕೊಂಡಿದ್ದೆ. ಅದನ್ನು ತಂದು ನಮ್ಮ ಸಂಗೀತ ನಿರ್ದೇಶಕ ಚರಣ್​ರಾಜ್ ಅವರಿಗೆ ಕೇಳಿಸಿದೆ. ಸೌಂಡಿಂಗ್ ಚೆನ್ನಾಗಿರುವುದರಿಂದ ಇದನ್ನು ಎಲ್ಲಾದರೂ ಬಳಸಿಕೊಳ್ಳಬೇಕು ಎಂದು ತೀರ್ಮಾನಿಸಿದೆ. ಅದಕ್ಕೆ ಅವರ ಫ್ಲೇವರ್ ಸೇರಿಸಿ, ಪ್ರಮೋಷನಲ್ ಹಾಡನ್ನಾಗಿ ಮಾಡಿಕೊಟ್ಟಿದ್ದಾರೆ’ ಎನ್ನುತ್ತಾರೆ ವಿಜಯ್. ಈ ಹಾಡು ಇದೀಗ ಜನಪ್ರಿಯವಾಗಿರುವುದರಿಂದ ಇದನ್ನು ಚಿತ್ರದಲ್ಲಿ ಬಳಸಿಕೊಳ್ಳುವ ಯೋಚನೆ ಇದೆಯೇ ಎಂದರೆ, ‘ಅದು ಸಸ್ಪೆನ್ಸ್. ಕಾದು ನೋಡಿ’ ಎನ್ನುತ್ತಾರೆ ವಿಜಯ್. ಈ ಹಾಡನ್ನು ಗಿರಿಜಾ ಸಿದ್ದಿ, ಗೀತಾ ಸಿದ್ದಿ ಮತ್ತು ಚೆನ್ನಕೇಶವ ಅವರು ಹಾಡಿದ್ದು, ಚರಣ್​ರಾಜ್ ಸಂಗೀತ ಸಂಯೋಜಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net