ಜನರನ್ನ ನಗಿಸಿದರೆ ಅದೇ ಸಾಧನೆ: ಟಿಕ್​ಟಾಕ್ ಸ್ಟಾರ್​ನ ಹೊಸ ದಿಶಾ

Disha
Published on

ಬೆಂಗಳೂರು: ಟಿಕ್​ಟಾಕ್​ನಲ್ಲಿ ಅವರದ್ದು ದೊಡ್ಡ ಹೆಸರು. ಕಿರುತೆರೆಯಲ್ಲೂ ಅವರು ಫೇಮಸ್ಸು. ಅದೆಲ್ಲದರ ಜನಪ್ರಿಯತೆಯಿಂದ ದಿಶಾ ಮದನ್, ಇದೀಗ ಸಿನಿಮಾಗೆ ಎಂಟ್ರಿ ಕೊಟ್ಟಿದ್ದಾರೆ. ದಿಶಾ ಅಭಿನಯದ ಮೊದಲ ಚಿತ್ರ, ‘ಫ್ರೆಂಚ್ ಬಿರಿಯಾನಿ’ ಇಂದು ಅಮೇಜಾನ್ ಪ್ರೖೆಮ್ಲ್ಲಿ ಬಿಡುಗಡೆಯಾಗುತ್ತಿದೆ.

ತಮ್ಮ ಮೊದಲ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿರುವ ದಿಶಾ, ಅದೊಂದು ಪಕ್ಕಾ ಕಾಮಿಡಿ ಚಿತ್ರ ಎಂದು ಬಣ್ಣಿಸುತ್ತಾರೆ. ‘ಇದೊಂದು ಮಜವಾದ ಚಿತ್ರ. ಈ ಕರೊನಾ ಪಿಡುಗಿನ ಸಂದರ್ಭದಲ್ಲಿ ಪ್ರತಿಯೊಬ್ಬರೂ ನೋಡಲೇಬೇಕಾದ ಚಿತ್ರ. ಈ ಸಂದರ್ಭದಲ್ಲಿ ಬಹಳಷ್ಟು ಜನ ತುಂಬಾ ಯೋಚನೆ ಮಾಡಿ, ಡಿಪ್ರೆಶನ್​ಗೆ ಜಾರಿದ್ದಾರೆ ಎಂಬ ಸುದ್ದಿಗಳು ಬರುತ್ತಿವೆ. ಇಂಥ ಸಂದರ್ಭದಲ್ಲಿ ಅವರನ್ನ ನಗಿಸಿದರೆ, ಅದೇ ನಮ್ಮ ನಿಜವಾದ ಸಾಧನೆ. ಹಾಗೆ ನಗಿಸುತ್ತೀವಿ ಎಂಬ ನಂಬಿಕೆ ನನಗಿದೆ’ ಎನ್ನುತ್ತಾರೆ ದಿಶಾ. ‘ಫ್ರೆಂಚ್ ಬಿರಿಯಾನಿ’ಯಲ್ಲಿ ಅವರದ್ದು ಪತ್ರಕರ್ತೆಯ ಪಾತ್ರವಂತೆ. ‘ಎಲ್ಲರಿಗೂ ಮಜ ಕೊಡುವ ಒಂದು ಕಥೆ ಮಾಡಿಟ್ಟುಕೊಂಡಿದ್ದಾರೆ ನಿರ್ದೇಶಕ ಪನ್ನಗ. ಒಂದು ಗೊಂದಲದಿಂದ ಏನೆಲ್ಲ ಆಗುತ್ತದೆ ಎನ್ನುವುದೇ ಕಥೆ. ಒಂದು ವಿಷಯವನ್ನು ಬೆನ್ನಟ್ಟಿಕೊಂಡು ಹೋಗುವ ನ್ಯೂಸ್ ರಿಪೋರ್ಟರ್ ಪಾತ್ರವನ್ನು ಇಲ್ಲಿ ಮಾಡಿದ್ದೇನೆ’ ಎಂದು ತಮ್ಮ ಪಾತ್ರದ ಬಗ್ಗೆ ಹೇಳುತ್ತಾರೆ ಅವರು.

ದಿಶಾ, ಕನ್ನಡಿಗರಿಗೆ ಮೊದಲು ಪರಿಚಯವಾಗಿದ್ದು, ‘ಡ್ಯಾನ್ಸಿಂಗ್ ಸ್ಟಾರ್’ನ ಸೀಸನ್ ಒಂದರಲ್ಲಿ. ಸುನಾಮಿ ಕಿಟ್ಟಿ ಜತೆಗೆ ಹೆಜ್ಜೆ ಹಾಕಿದ್ದ ದಿಶಾ ಸಾಕಷ್ಟು ಜನಪ್ರಿಯರಾದರು. ಅದೇ ಜನಪ್ರಿಯತೆ, ಅವರಿಗೆ ‘ಕುಲವಧು’ ಧಾರಾವಾಹಿಯಲ್ಲಿ ನಟಿಸುವ ಅವಕಾಶ ತಂದುಕೊಟ್ಟಿತು. ಒಂದೂವರೆ ವರ್ಷ ಧಾರಾವಾಹಿಯಲ್ಲಿ ನಟಿಸಿದ ನಂತರ ಅವರು ಬ್ರೇಕ್ ತೆಗೆದುಕೊಂಡರು. ಈ ಮಧ್ಯೆ, ಶಿವರಾಜಕುಮಾರ್ ನಿರ್ವಣದ ‘ಹೇಟ್ ಯೂ ರೋಮಿಯೋ’ ಎಂಬ ವೆಬ್ ಸೀರೀಸ್​ನಲ್ಲಿ ನಟಿಸಿದರು. ಮುಂದೇನು ಎನ್ನುವಾಗಲೇ, ಚಿತ್ರದಲ್ಲಿ ನಟಿಸುವುದಕ್ಕೆ ಪನ್ನಗ ಅವರಿಂದ ಫೋನ್ ಬಂತಂತೆ. ‘ಈ ಚಿತ್ರದಲ್ಲಿ ನಟಿಸುವಾಗ ಗರ್ಭಿಣಿಯಾಗಿದ್ದೆ. ಡ್ಯಾನ್ಸು, ಸ್ಟಂಟ್ ಅಂತ ರಿಸ್ಕಿ ಸನ್ನಿವೇಶಗಳಲ್ಲೂ ಕಾಣಿಸಿಕೊಂಡಿದ್ದೇನೆ. ನಾವು ಹಾಕಿರುವ ಶ್ರಮಕ್ಕೆ ಒಳ್ಳೆಯ ಪ್ರತಿಫಲ ಸಿಗುತ್ತದೆ ಎಂಬ ಭರವಸೆ ಇದೆ’ ಎಂದು ಮಾತು ಮುಗಿಸುತ್ತಾರೆ ದಿಶಾ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net