

ಹೊಸಹೊಸ ಸಾಹಸಗಳನ್ನು ಮಾಡುವುದರಲ್ಲಿ ಟೈಗರ್ ಶ್ರಾಫ್ ಯಾವತ್ತೂ ಎತ್ತಿದ ಕೈ. ತಮ್ಮ ಪ್ರತಿ ಚಿತ್ರದಲ್ಲೂ ಒಂದಲ್ಲ ಒಂದು ಹೊಸದೇನನ್ನೋ ಪ್ರಯತ್ನಿಸುತ್ತಲೇ ಇರುತ್ತಾರೆ. ಈಗ್ಯಾಕೆ ಈ ಮಾತು ಎಂದರೆ, ಟೈಗರ್ ಸದ್ದಿಲ್ಲದೆ ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ.
ಏನದು ಎಂಬ ಪ್ರಶ್ನೆಯಾ? ಉತ್ತರ ಇಲ್ಲಿದೆ ನೋಡಿ. ಇದುವರೆಗೂ ಬರೀ ನಾಯಕನಾಗಿದ್ದ ಟೈಗರ್, ಇದೀಗ ಗಾಯಕರಾಗಿದ್ದಾರೆ. 'ಅನ್ಬಿಲೀವಬಲ್' ಎಂಬ ಹೊಸ ಆಲ್ಬಂವೊಂದರ ಹಾಡುಗಳನ್ನು ಅವರು ಹಾಡಿದ್ದಾರೆ.
ಈ ಕುರಿತು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಶೇರ್ ಮಾಡಿರುವ ಅವರು, 'ಹಾಡು ಹಾಡಬೇಕು ಎಂಬ ಆಸೆ ಬಹಳ ದಿನಗಳಿಂದ ಇತ್ತು. ಆದರೆ, ಅದಕ್ಕೆ ಧೈರ್ಯ ಸಾಕಾಗಿರಲಿಲ್ಲ. ಈ ಲಾಕ್ಡೌನ್ನಲ್ಲಿ ಸಾಕಷ್ಟು ತಾಲೀಮು ಮಾಡಿ, ಹೊಸದೇನನ್ನೋ ಪ್ರಯತ್ನಿಸಿದ್ದೇನೆ' ಎಂದು ಆಲ್ಬಂನ ಮೋಷನ್ ಪೋಸ್ಟರ್ನ್ನು ಅವರು ಹಂಚಿಕೊಂಡಿದ್ದಾರೆ.
ಈ ಹಾಡನ್ನು ಬಿಗ್ ಬ್ಯಾಂಗ್ ಮ್ಯೂಸಿಕ್ನವರು ನಿರ್ಮಿಸಿದ್ದು, 'ಸ್ಟೂಡೆಂಟ್ ಆಫ್ ದಿ ಇಯರ್ 2' ಚಿತ್ರವನ್ನು ನಿರ್ದೇಶಿಸಿದ್ದ ಪುನೀತ್ ಮಲ್ಹೋತ್ರ ನಿರ್ದೇಶನ ಮಾಡಿದ್ದಾರೆ. ಇನ್ನು ಡಿಜಿ ಮೇಯ್ನ್ ಮತ್ತು ಅವಿತೇಶ್ ಹಾಡು ಬರೆದಯುವುದರ ಜತೆಗೆ ಸಂಗೀತ ಸಂಯೋಜಿಸಿದ್ದಾರೆ.
ಇದನ್ನೂ ಓದಿ: ನಿಖಿಲ್ ಚಿತ್ರದ ಹೆಸರೇನು? ಶುಕ್ರವಾರ ಸಿಗಲಿದೆ ಉತ್ತರ
ಇನ್ನು ಲಾಕ್ಡೌನ್ ಶುರುವಾಗುವುದಕ್ಕಿಂತ ಮುನ್ನ ಟೈಗರ್ ಅಭಿನಯದ 'ಭಾಗಿ 3' ಎಂಬ ಚಿತ್ರ ಬಿಡುಗಡೆಯಾಗಿತ್ತು. ಇದಲ್ಲದೆ 'ಹೀರೋಪಂತಿ 2' ಚಿತ್ರದಲ್ಲಿ ಅವರು ನಟಿಸುತ್ತಿದ್ದು, ಈ ಚಿತ್ರ ಮುಂದಿನ ವರ್ಷ ಬಿಡುಗಡೆಯಾಗಲಿದೆ.