

ಸುಶಾಂತ್ ಸಿಂಗ್ ಸಾವಿನ ನಂತರ, ಅವರ ಹಲವು ಕನಸುಗಳನ್ನು ನನಸಾಗಿಸಿ ಎಂದು ಅವರ ಅಭಿಮಾನಿಗಳಿಗೆ ಸುಶಾಂತ್ ಸಹೋದರಿ ಶ್ವೇತಾ ಸಿಂಗ್ ಕೀರ್ತಿ ಕರೆ ನೀಡಿದ್ದರು. ಈ ವಿಷಯದಲ್ಲಿ ಸುಶಾಂತ್ ಅವರ ಮಾಜಿ ಗೆಳತಿ ಅಂಕಿತಾ ಲೋಖಂಡೆ ಹೆಜ್ಜೆ ಇಟ್ಟಿದ್ದಾರೆ.
ಸುಶಾಂತ್ಗೆ 1000 ಗಿಡಗಳನ್ನು ನೆಡಬೇಕು ಎಂಬ ಆಸೆ ಇತ್ತಂತೆ. ಆ ಆಸೆ ಈಡೇರುವಷ್ಟರಲ್ಲೇ ಅವರು ಇಹಲೋಕ ತ್ಯಜಿಸಿದ್ದರು. ಜೂನ್ 14ರಂದು ಆತ್ಮಹತ್ಯೆ ಮಾಡಿಕೊಂಡ ಸುಶಾಂತ್ ತಮ್ಮ ಹಲವು ಕನಸುಗಳನ್ನು ಅಪೂರ್ಣವಾಗಿ ಬಿಟ್ಟು ಹೋಗಿದ್ದಾರೆ.
ಈ ನಿಟ್ಟಿನಲ್ಲಿ ಸುಶಾಂತ್ ಅವರ ಸಹೋದರಿ ಇತ್ತೀಚೆಗೆ ಪ್ಲಾಂಟ್ಸ್ಫಾರ್ಎಸ್ಎಸ್ಆರ್ ಎಂಬ ಅಭಿಯಾನವನ್ನು ಪ್ರಾರಂಭಿಸಿದ್ದರು. ಗಿಡಗಳನ್ನು ನೆಡುವುದರ ಮೂಲಕ ಸುಶಾಂತ್ ಅವರ ಕನಸನ್ನು ನನಸು ಮಾಡಬೇಕು ಎಂದು ಅಭಿಮಾನಿಗಳಿಗೆ ಕರೆ ನೀಡಿದ್ದರು.
ಇದರ ಅಂಗವಾಗಿ ಸುಶಾಂತ್ ಅವರ ಮಾಜಿ ಗೆಳೆತಿ ಅಂಕಿತಾ ಲೋಖಂಡೆ, ಗಿಡಗಳನ್ನು ಖರೀದಿಸುವುದಕ್ಕೆ ಹೋಗಿದ್ದಾರೆ. ಒಂದಿಷ್ಟು ಗಿಡಗಳನ್ನು ಖರೀದಿಸಿರುವ ಅವರು, ಅವೆಲ್ಲವನ್ನೂ ಸದ್ಯದಲ್ಲೇ ನೆಡಲಿದ್ದಾರೆ. ಗಿಡಗಳನ್ನು ಖರೀದಿಸುವುದಕ್ಕೆ ಹೋದ ಸಂದರ್ಭದಲ್ಲಿ ಅಂಕಿತಾ ಅವರು ಪಾಪರಾಝಿಗಳ ಕಣ್ಣಿಗೆ ಬಿದ್ದಿದ್ದಾರೆ.
ಈ ಕುರಿತು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿಕೊಂಡಿರುವ ಅವರು, 'ಗಿಡ ನೆಡುವುದು ಸುಶಾಂತ್ ಅವರ 50 ಕನಸುಗಳಲ್ಲಿ ಒಂದಾಗಿತ್ತು. ಗಿಡ ನೆಡುವ ಕನಸಿಗೆ ನನ್ನ ಕಡೆಯಿಂದ ಒಂದು ಸಣ್ಣ ಕಾಣಿಕೆ. ಬೇರೆಯವರು ಸಹ ಇದರಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಾರೆ ಎಂದು ನಂಬಿದ್ದೇನೆ' ಎಂದು ಅವರು ಹೇಳಿಕೊಂಡಿದ್ದಾರೆ.