3 ವರ್ಷ ಒಂದೇ ಬೆಡ್​, 23 ಸರ್ಜರಿ, ಮತ್ತೆಂದೂ ನಡೆಯಲಾಗದ ಪರಿಸ್ಥಿತಿ: ನೋವಿನ ಸಂಗತಿ ಬಿಚ್ಚಿಟ್ಟ ನಟ ವಿಕ್ರಮ್

Chiyaan vikram
Published on

ಚೆನ್ನೈ: ತಮಿಳು ಚಿತ್ರರಂಗದಲ್ಲಿ ಮೂಡಿಬಂದಿರುವ ತಂಗಲನ್ ಸಿನಿಮಾ ನಟ ಚಿಯಾನ್​ ವಿಕ್ರಮ್ ಅಭಿನಯದ ಬಹು ನಿರೀಕ್ಷಿತ ಚಿತ್ರವಾಗಿದೆ. ಆಗಸ್ಟ್​ 15ರ ಸ್ವಾತಂತ್ರ್ಯ ದಿನದಂದು ಈ ಸಿನಿಮಾ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗಲಿದೆ. ಈ ಸಿನಿಮಾವನ್ನು ಖ್ಯಾತ ನಿರ್ದೇಶಕ ಪಾ. ರಂಜಿತ್​​​ ನಿರ್ದೇಶನ ಮಾಡಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ತಂಗಲನ್ ಸಿನಿಮಾದ ಆಡಿಯೋ ಬಿಡುಗಡೆ ಸಮಾರಂಭ ಅದ್ಧೂರಿಯಾಗಿ ನಡೆಯಿತು. ಈ ವೇಳೆ ನಟ ವಿಕ್ರಮ್ ಅವರು ತಮ್ಮ ಸಿನಿ ಜೀವನದ ಕೆಲ ಕಹಿ ಅನುಭವಗಳನ್ನು ಬಹಿರಂಗಪಡಿಸಿದರು. ಇದಕ್ಕೆ ಸಂಬಂಧಿಸಿದ ವಿಡಿಯೋ ತುಣುಕುಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ತಮ್ಮ ವೃತ್ತಿ ಜೀವನದಲ್ಲಿ ಒಮ್ಮೆ ವಿಕ್ರಮ್​ ಕಾಲಿನ ಗಾಯದ ಸಮಸ್ಯೆಗೆ ಒಳಗಾಗಿದ್ದರು. ಈ ಬಗ್ಗೆ ಮಾತನಾಡಿರುವ ಅವರು, ನಾನು ಅಪಘಾತಕ್ಕೀಡಾಗಿದ್ದೆ. ಇದರಿಂದ ನನ್ನ ಕಾಲು ಮುರಿದಿತ್ತು. ಮತ್ತೆ ಎಂದಿಗೂ ನಡೆಯಲು ಆಗುವುದಿಲ್ಲ ಎಂದು ವೈದ್ಯರು ಹೇಳಿದ್ದರು. ನಾನು ಸುಮಾರು 3 ವರ್ಷಗಳ ಕಾಲ ಆಸ್ಪತ್ರೆಯಲ್ಲಿದ್ದೆ. ಸುಮಾರು 23 ಬಾರಿ ಸರ್ಜರಿಗು ಕೂಡ ಒಳಗಾಗಿದ್ದೇನೆ ಎಂದು ವಿಕ್ರಮ್​ ತಿಳಿಸಿದ್ದಾರೆ.

ಒಂದೇ ವರ್ಷದಲ್ಲಿ ಹಲವು ಬಾರಿ ಸರ್ಜರಿಗೆ ಒಳಗಾದೆ. ಆದರೂ ಸಿನಿಮಾ ಮೇಲಿನ ನನ್ನ ಪ್ರೀತಿ ಮತ್ತು ನಂಬಿಕೆಯಿಂದ ನಾನು ಮತ್ತೆ ವಾಪಾಸಾದೆ ಎಂದು ವಿಕ್ರಮ್​ ಹೇಳಿದರು. ಇದಕ್ಕೆ ಸಂಬಂಧಿಸಿದ ವಿಡಿಯೋವನ್ನು ತಂಗಲನ್​ ಸಿನಿಮಾ ನಿರ್ಮಾಣ ಸಂಸ್ಥೆ "ಹೋಮ್​ ಸ್ಕ್ರೀನ್​ ಎಂಟರ್ಟೈನ್​ಮೆಂಟ್" ತನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. ಸದ್ಯ ವಿಡಿಯೋ ವೈರಲ್​ ಆಗಿದ್ದು, ಸಿನಿಮಾ ಮೇಲೆ ವಿಕ್ರಮ್ ಅವರಿಗೆ ಇರುವ​ ಪ್ರೀತಿಯ ಬಗ್ಗೆ ತಿಳಿದು ಎಲ್ಲರು ವಿಕ್ರಮ್​ ಅವರನ್ನು ಕೊಂಡಾಡುತ್ತಿದ್ದಾರೆ.

ವಿಕ್ರಮ್​-ರಿಷಭ್​ ಭೇಟಿ

ಕನ್ನಡದ ಡಿವೈನ್​ ಸ್ಟಾರ್​ ರಿಷಭ್​ ಶೆಟ್ಟಿ ಅವರು ಸೂಪರ್​ ಸ್ಟಾರ್​ ಚಿಯಾನ್ ವಿಕ್ರಮ್ ಅವರನ್ನು ಭೇಟಿ ಮಾಡಿದ್ದಾರೆ. ತಂಗಲನ್ ಚಿತ್ರದ ಪ್ರಚಾರಕ್ಕೆ ವಿಕ್ರಮ್​ ಅವರು ನಿನ್ನೆ ಬೆಂಗಳೂರಿಗೆ ಬಂದಿದ್ದರು. ಈ ವೇಳೆ ಖಾಸಗಿ ಹೋಟೆಲ್​ನಲ್ಲಿ ವಿಕ್ರಮ್ ಅವರನ್ನು ರಿಷಭ್​ ಶೆಟ್ಟಿ ಭೇಟಿಯಾಗಿದ್ದಾರೆ. ಇದಕ್ಕೆ ಸಂಬಂಧಿಸಿದ ಫೋಟೋಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ವಿಕ್ರಮ್ ಭೇಟಿಗೆ ಸಂತಸ ವ್ಯಕ್ತಪಡಿಸಿ 24 ವರ್ಷಗಳ ಕಾಯುವಿಕೆ ಈಡೇರಿದೆ. ನನಗೆ ಸ್ಪೂರ್ತಿಯಾದ ವ್ಯಕ್ತಿಯನ್ನು ನಾನು ಭೇಟಿಯಾಗಿದ್ದೇನೆ. ನಾನು ಈ ಭೂಮಿ ಮೇಲಿನ ಅದೃಷ್ಟಶಾಲಿ ಎಂದು ರಿಷಭ್​ ಶೆಟ್ಟಿ ಬರೆದುಕೊಂಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net