

ಮುಂಬೈ: ಹಲವು ವರ್ಷಗಳ ಹಿಂದೆ, ಬಾಲಿವುಡ್ನಲ್ಲಿ ಬಿಡುಗಡೆಯಾದ 'ಅಪ್ನೇ' ಎಂಬ ಚಿತ್ರ ನೆನಪಿರಬಹುದು. ಈ ಚಿತ್ರದಲ್ಲಿ ಧರ್ಮೇಂದ್ರ ಅಲ್ಲದೆ, ಅವರ ಮಕ್ಕಳಾದ ಸನ್ನಿ ಡಿಯೋಲ್ ಮತ್ತು ಬಾಬ್ಬಿ ಡಿಯೋಲ್ ಸಹ ಜೊತೆಯಾಗಿ ನಟಿಸಿದ್ದರು. ಒಂದೇ ಚಿತ್ರದಲ್ಲಿ ಒಂದೇ ಕುಟುಂಬದ ಎರಡು ತಲೆಮಾರಿನ ನಟರು ನಟಿಸಿದ್ದು ವಿಶೇಷವಾಗಿತ್ತು.
ಇದೀಗ ಆ ದಾಖಲೆಯನ್ನು ಮುರಿಯುವುದಕ್ಕೆ ಧರ್ಮೇಂದ್ರ ಕುಟುಂಬದವರು ಸಿದ್ಧತೆ ನಡೆಸಿದ್ದಾರೆ. 'ಅಪ್ನೇ' ಚಿತ್ರದಲ್ಲಿ ಡಿಯೋಲ್ ಕುಟುಂಬದ ಎರಡು ತಲೆಮಾರಿನ ನಟರು ನಟಿಸಿದರೆ, 'ಅಪ್ನೇ 2' ಎಂಬ ಚಿತ್ರದಲ್ಲಿ ಅದೇ ಕುಟುಂಬದ ಮೂರು ತಲೆಮಾರಿನ ಕಲಾವಿದರು ತೆರೆ ಹಂಚಿಕೊಳ್ಳಲಿದ್ದಾರೆ ಎನ್ನುವುದು ವಿಶೇಷ.
ಈ ಚಿತ್ರದಲ್ಲಿ ಧರ್ಮೇಂದ್ರ, ಅವರ ಮಕ್ಕಳಾದ ಸನ್ನಿ ಡಿಯೋಲ್ ಮತ್ತು ಬಾಬ್ಬಿ ಡಿಯೋಲ್ ಜತೆಗೆ ಸನ್ನಿ ಡಿಯೋಲ್ ಅವರ ಮಗ ಕರಣ್ ಡಿಯೋಲ್ ಸಹ ನಟಿಸುತ್ತಿದ್ದಾನೆ. ಕರಣ್ ಈ ಹಿಂದೆ ಒಂದು ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದ. ಕಾರಣಾಂತರಗಳಿಂದ ಚಿತ್ರ ಗೆಲ್ಲಲಿಲ್ಲ. ಈಗ ಅಪ್ಪ ಮತ್ತು ತಾತನ ಜತೆಗೆ ತೆರೆ ಹಂಚಿಕೊಳ್ಳುವುದಕ್ಕೆ ಸಿದ್ಧತೆ ನಡೆಸಿದ್ದಾನೆ.
ಇದನ್ನೂ ಓದಿ: ಬುಧವಾರ ಹೊಸ ಚಿತ್ರ ಘೋಷಿಸಲಿರುವ ಹೊಂಬಾಳೆ ಫಿಲಂಸ್ …
ಸೋಮವಾರ ಗುರು ನಾನಕ್ ಜಯಂತಿಯ ಅಂಗವಾಗಿ ಚಿತ್ರವನ್ನು ಧರ್ಮೇಂದ್ರ ಕುಟುಂಬದವರು ಅಧಿಕೃತವಾಗಿ ಘೋಷಿಸಿದ್ದಾರೆ. 2021ರ ಮಾರ್ಚ್ನಲ್ಲಿ ಚಿತ್ರ ಪ್ರಾರಂಭವಾಗಲಿದ್ದು, ಮುಂದಿನ ವರ್ಷದ ದೀಪಾವಳಿಗೆ ಚಿತ್ರ ಬಿಡುಗಡೆಯಾಗಲಿದೆ. 'ಅಪ್ನೇ' ಚಿತ್ರವನ್ನು ನಿರ್ದೇಶನ ಮಾಡಿದ್ದ ಅನಿಲ್ ಶರ್ಮ ಅವರೇ, ಈ ಚಿತ್ರವನ್ನೂ ನಿರ್ದೇಶನ ಮಾಡಲಿದ್ದಾರೆ.