ಸದ್ದಿಲ್ಲದೆ ಹೊಸ ದಾಖಲೆ ಮಾಡಲು ಸಜ್ಜಾದ ಅಚ್ಯುತ್​ ಕುಮಾರ್; ಏನದು?

Achyuth Kumar
Published on

ಬೆಂಗಳೂರು: ಕನ್ನಡ ಚಿತ್ರರಂಗದ ಸಖತ್​ ಬಿಜಿ ನಟ ಎಂದರೆ ಅದು ಅಚ್ಯುತ್​ ಕುಮಾರ್. ಈಗಾಗಲೇ ಅವರ ಅಭಿನಯದ ಹಲವು ಚಿತ್ರಗಳು ಈ ವರ್ಷ ಬಿಡುಗಡೆಯಾಗಿವೆ. 'ಕಾಂತಾರ', 'ಮಾನ್ಸೂನ್​ ರಾಗ', 'ತುರ್ತು ನಿರ್ಗಮನ', 'ಸಕುಟುಂಬ ಸಮೇತ', 'ತ್ರಿಕೋನ', 'ಫೋರ್​ ವಾಲ್ಸ್​' ಸೆಲ್ಫಿ ಮಮ್ಮಿ ಗೂಗಲ್​ ಡ್ಯಾಡಿ' ಮುಂತಾದ ಹಲವು ಚಿತ್ರಗಳಲ್ಲಿ ಅವರು ನಟಿಸಿದ್ದಾರೆ.

ಈಗ ಅಚ್ಯುತ್​ ಕುಮಾರ್​ ಸದ್ದಿಲ್ಲದೆ ಹೊಸದೊಂದು ದಾಖಲೆ ಮಾಡುವುದಕ್ಕೆ ಹೊರಟಿದ್ದಾರೆ. ಈ ವಾರ ನಾಲ್ಕೈದು ಚಿತ್ರಗಳು ಬಿಡುಗಡೆಯಾಗುತ್ತಿದ್ದು, ಈ ಪೈಕಿ ಮೂರು ಚಿತ್ರಗಳಲ್ಲಿ ಅಚ್ಯುತ್​ ಕುಮಾರ್​ ನಟಿಸಿದ್ದಾರೆ ಎಂಬುದು ವಿಶೇಷ.

ಹೌದು, ಈ ವಾರ ಬಿಡುಗಡೆಯಾಗುತ್ತಿರುವ ಚಿತ್ರಗಳ ಪೈಕಿ ಗಣೇಶ್​ ಅಭಿನಯದ 'ತ್ರಿಬಲ್​ ರೈಡಿಂಗ್​', ಇಶಾನ್​ ಅಭಿನಯದ 'ರೆಮೋ' ಮತ್ತು ರಾಕೇಶ್​ ಮಯ್ಯ ಅಭಿನಯದ 'ಸದ್ದು ವಿಚಾರಣೆ ನಡೆಯುತ್ತಿದೆ' ಚಿತ್ರಗಳಲ್ಲಿ ಅಚ್ಯುತ್​ ಕುಮಾರ್​ ನಟಿಸಿದ್ದಾರೆ. ಈ ಪೈಕಿ 'ಸದ್ದು ವಿಚಾರಣೆ ನಡೆಯುತ್ತಿದೆ' ಚಿತ್ರದಲ್ಲಿ ಅವರು ಇನ್​ಸ್ಪೆಕ್ಟರ್​ ಪಾತ್ರ ಮಾಡಿದರೆ, ಇನ್ನೆರಡು ಚಿತ್ರಗಳಲ್ಲಿ ವಿಭಿನ್ನವಾದ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಒಂದು ಕಡೆ ಗಣೇಶ್​ ಮೂವರು ನಾಯಕಿಯರೊಂದಿಗೆ ತ್ರಿಬಲ್​ ರೈಡಿಂಗ್​ ಮಾಡಿದರೆ, ಈ ಕಡೆ ಅಚ್ಯುತ್​ ಕುಮಾರ್​ ಸಹ ಒಂದೇ ವಾರ ಮೂರು ಚಿತ್ರಗಳೊಂದಿಗೆ ತ್ರಿಬಲ್​ ರೈಡಿಂಗ್​ ಹೊರಟಿದ್ದಾರೆ.

ಒಬ್ಬ ನಟನ ಒಂದೋ, ಎರಡೋ ಚಿತ್ರಗಳು ಒಂದೇ ದಿನ ಬಿಡುಗಡೆಯಾಗುವುದು ಹೊಸದೇನಲ್ಲ. ಆದರೆ, ಅಚ್ಯುತ್​ ಅಭಿನಯದ ಮೂರು ಚಿತ್ರಗಳು ಒಟ್ಟಿಗೇ ಒಂದೇ ದಿನ ಬಿಡುಗಡೆಯಾಗುತ್ತಿರುವುದು ಸದ್ಯದ ಮಟ್ಟಿಗೆ ಒಂದು ದಾಖಲೆಯೇ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net