ಈ ಒಂದು ಕಾರಣಕ್ಕೆ ಬಾಲಿವುಡ್ ಸಿನಿಮಾಗಳಲ್ಲಿ ನಟಿಸಲ್ಲ! ಕೊನೆಗೂ ಮೌನ ಮುರಿದ ತ್ರಿಷಾ

Actress Trisha
Published on

ಚೆನ್ನೈ: ಬಹುಭಾಷ ನಟಿ ತ್ರಿಷಾ ಅವರವನ್ನು ಪರಿಚಯಿಸುವ ಅಗತ್ಯವಿಲ್ಲ. ತಮಿಳು, ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ಸ್ಟಾರ್​ ನಟಿಯಾಗಿರುವ ತ್ರಿಷಾ ಇಳಯದಳಪತಿ ವಿಜಯ್​, ಸೂರ್ಯ, ವಿಕ್ರಮ್, ಪ್ರಭಾಸ್​, ಚಿರಂಜೀವಿ, ಅಜಿತ್​, ಸಿಂಬು ಸೇರಿದಂತೆ ಸ್ಟಾರ್​ ನಟರ ಜೊತೆ ಅಭಿನಯಿಸಿದ್ದಾರೆ.

ಕನ್ನಡದಲ್ಲೂ ದಿವಂಗತ ನಟ ಪುನೀತ್​ ರಾಜ್​ಕುಮಾರ್​ ಅಭಿನಯದ ಪವರ್​ಸ್ಟಾರ್​ ಸಿನಿಮಾದಲ್ಲಿ ನಾಯಕಿಯಾಗುವ ಮೂಲಕ ಕನ್ನಡಿಗರಿಗೂ ನಟಿ ತ್ರಿಷಾ ಪರಿಚಿತರಾಗಿದ್ದಾರೆ. ಪುನೀತ್​ ನಟಿಸಬೇಕಿದ್ದ ದ್ವಿತ್ವ ಸಿನಿಮಾಗೂ ತ್ರಿಷಾ ನಾಯಕಿ ಎಂದು ಹೇಳಲಾಗಿತ್ತು. ಆದರೆ, ಪುನೀತ್​ ಅಕಾಲಿಕ ಮರಣದಿಂದ ಆ ಸಿನಿಮಾ ನಿಂತಿದೆ.

ಇತ್ತೀಚೆಗಷ್ಟೇ ಅವರ ನಟನೆಯ ಪೊನ್ನಿಯನ್​ ಸೆಲ್ವನ್​ ಮತ್ತು ಲಿಯೋ ಸಿನಿಮಾ ಉತ್ತಮ ಯಶಸ್ಸು ಗಳಿಸಿತು. ಸಾಕಷ್ಟು ಸಿನಿಮಾಗಳಲ್ಲಿ ತ್ರಿಷಾ ಬಿಜಿಯಾಗಿದ್ದಾರೆ. ತ್ರಿಷಾ ತಮ್ಮ ವೃತ್ತಿ ಜೀವನದಲ್ಲಿ ಈವರಗೆ ಕೇವಲ ಒಂದೇ ಒಂದು ಹಿಂದಿ ಸಿನಿಮಾದಲ್ಲಿ ನಟಿಸಿದ್ದಾರೆ. 2010ರಲ್ಲಿ ತೆರೆಕಂಡ ಅಕ್ಷಯ್​ ಕುಮಾರ್​ ನಟನೆಯ ಖಟ್ಟಾ ಮಿಟ್ಟಾ ಸಿನಿಮಾದಲ್ಲಿ ತ್ರಿಷಾ ನಟಿಸಿದರು.

ಇದೇ ನನ್ನ ಕೊನೆಯ ಸಿನಿಮಾ

ಖಟ್ಟಾ ಮಿಟ್ಟಾ ಸಿನಿಮಾ ಬಳಿಕ ತ್ರಿಷಾ ಮತ್ತೆ ಹಿಂದಿಯಲ್ಲಿ ನಟಿಸಲೇ ಇಲ್ಲ. ಇದಕ್ಕೆ ಕಾರಣ ನೀಡಿರುವ ತ್ರಿಷಾ, ಖಟ್ಟಾ ಮಿಟ್ಟಾ ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದೆವು. ಆದರೆ, ಈ ಸಿನಿಮಾ ಸಕ್ಸಸ್​ ಕಾಣದೇ ಹೀನಾಯ ಸೋತಿತು. ಹಿಂದಿ ಅಭಿಮಾನಿಗಳ ಮನಸ್ಸಿನಲ್ಲಿ ಜಾಗ ಪಡೆಯುವಲ್ಲಿ ನಾನು ವಿಫಲವಾದೆ. ಹೀಗಾಗಿ ಇದೇ ನನ್ನ ಮೊದಲ ಮತ್ತು ಕೊನೆಯ ಹಿಂದಿ ಸಿನಿಮಾ ಆಗಿದೆ. ಈ ಕಾರಣಕ್ಕಾಗಿಯೇ ನಾನು ಬಾಲಿವುಡ್​ ತೊರೆದೆ ಎಂದು ತ್ರಿಷಾ ಮಾಧ್ಯಮ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

ಸಿನಿಮಾ ವಿಚಾರಕ್ಕೆ ಬಂದರೆ, ತ್ರಿಷಾ ಅವರು ಮೆಗಾಸ್ಟಾರ್​ ಚಿರಂಜೀವಿ ನಟನೆಯ ವಿಶ್ವಂಭರಂ ಸಿನಿಮಾಗೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಇದರೊಂದಿಗೆ ತಮಿಳು ಸಿನಿಮಾಗಳಾದ ವಿದ ಮುಯರ್ಚಿ, ಥಗ್​ ಲೈಫ್​ ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ. ಮೋಹನ್​ಲಾಲ್​ ನಟನೆಯ ರಾಮ್​ ಹೆಸರಿನ ಮಲಯಾಳಂ ಸಿನಿಮಾಗೂ ತ್ರಿಷಾ ನಾಯಕಿಯಾಗಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net