ಮಧ್ಯರಾತ್ರಿ ಕರೆ ಮಾಡಿ ಬಾ ಅಂತಿದ್ರು, ಹರಿದ ಬಟ್ಟೆಯಲ್ಲಿ ರಸ್ತೆ ಮೇಲೆ ಬಿದ್ದಿದ್ದೆ: ಕಿರಣ್​ ರಾಥೋಡ್​ ಅಳಲು

Kiran Rathod
Published on

ಹೈದರಾಬಾದ್​: ಈಗಾಗಲೇ ಸಾಕಷ್ಟು ನಟಿಯರು ಸಿನಿಮಾ ಇಂಡಸ್ಟ್ರಿಯಲ್ಲಿ ನಡೆಯುವ ಕಾಸ್ಟಿಂಗ್​ ಕೌಚ್​ ಬಗ್ಗೆ ಮಾತನಾಡಿದ್ದಾರೆ. ನಿರ್ದೇಶಕರು, ನಟರು ಹಾಗೂ ನಿರ್ಮಾಪಕರು ಅವಕಾಶದ ಹೆಸರಿನಲ್ಲಿ ತಮ್ಮ ಬಯಕೆಗಳನ್ನು ಈಡೇರಿಸುವಂತೆ ನಟಿಯರನ್ನು ಕೇಳುವುದು ಸಿನಿ ಇಂಡಸ್ಟ್ರಿಗೆ ಅಂಟಿಕೊಂಡಿರುವ ಶಾಪವಾಗಿದೆ. ಬಾಲಿವುಡ್​, ಟಾಲಿವುಡ್​, ಕಾಲಿವುಡ್​, ಸ್ಯಾಂಡಲ್​ವುಡ್​ ಮತ್ತು ಮಾಲಿವುಡ್​ನಲ್ಲಿ ನಡೆಯುವ ಕಾಸ್ಟಿಂಗ್​ ಕೌಚ್​ಗೆ ಅನೇಕ ಕಲಾವಿದೆಯರು ಸಂತ್ರಸ್ತೆಯರಾಗಿದ್ದಾರೆ. ಇನ್ನು ಕೆಲವರು ಅದನ್ನು ಎದುರಿಸಿದ್ದಾರೆ. ತಾವು ಅನುಭವಿಸಿದ ಕಹಿ ಘಟನೆಗಳನ್ನು ಹೇಳಿಕೊಳ್ಳಲು ಕೆಲವರು ಹಿಂದೇಟು ಹಾಕಿದರೆ, ಕೆಲವು ಧೈರ್ಯವಾಗಿ ಹೇಳಿಕೊಳ್ಳುತ್ತಾರೆ. ಇದೀಗ ಆ ಸಾಲಿಗೆ ಮತ್ತೊಬ್ಬ ನಟಿ ಸೇರಿಕೊಂಡಿದ್ದಾರೆ.

ನಿಮಗೆ ನಟಿ ಕಿರಣ್​ ರಾಥೋಡ್​ ಬಗ್ಗೆ ಗೊತ್ತಿರಬಹುದು. ಕ್ಷಣ ಕ್ಷಣ, ಗನ್​ ಮತ್ತು ಮಾಣಿಕ್ಯ ಸೇರಿದಂತೆ ಕೆಲ ಕನ್ನಡ ಸಿನಿಮಾಗಳಲ್ಲಿ ನಟಿಸಿರುವ ನಟಿ ಕಿರಣ್​ ರಾಥೋಡ್, ಕನ್ನಡಿಗರಿಗೂ ಪರಿಚಿತರಾಗಿದ್ದಾರೆ. ತಮಿಳು ಮತ್ತು ತೆಲುಗು ಸಿನಿಮಾಗಳಲ್ಲಿ ಹೆಚ್ಚಾಗಿ ನಟಿಸಿದ್ದು, ಅಲ್ಲಿನ ಮಂದಿಗೆ ಹೆಚ್ಚು ಹತ್ತಿರವಾಗಿದ್ದಾರೆ. ತಮ್ಮ ಬೋಲ್ಡ್​ ಪಾತ್ರಗಳಿಂದಲೂ ಕಿರಣ್​ ಖ್ಯಾತಿ ಪಡೆದಿದ್ದರು. ಸಿನಿಮಾ ವೃತ್ತಿ ಜೀವನದಲ್ಲಿ ಉತ್ತುಂಗದಲ್ಲಿರುವಾಗಲೇ ಕಿರಣ್​ ಇದ್ದಕ್ಕಿದ್ದಂತೆ ನಾಪತ್ತೆಯಾದರು. ಅಂದಿನಿಂದ ಸಿನಿಮಾ ಅವಕಾಶಗಳು ಸಹ ಕಿರಣ್​ ಕೈತಪ್ಪಿ ಹೋದವು. ಸದ್ಯ ಅವರು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸಕ್ರಿಯರಾಗಿದ್ದಾರೆ. ಇತ್ತೀಚೆಗೆ ಮಾಧ್ಯಮ ಸಂದರ್ಶನವೊಂದರಲ್ಲಿ ಪಾಲ್ಗೊಂಡ ಕಿರಣ್​, ತಮ್ಮ ವೈಯಕ್ತಿಕ ಮತ್ತು ಸಿನಿ ಜೀವನದ ಕೆಲವೊಂದಿಷ್ಟು ಆಸಕ್ತಿಕರ ಮಾಹಿತಿಗಳನ್ನು ಬಹಿರಂಗಪಡಿಸಿದ್ದಾರೆ.

ಸಿನಿಮಾದಿಂದ ದೂರವಾಗಲು ಇರುವ ಪ್ರಮುಖ ಕಾರಣಗಳಲ್ಲಿ ಒಂದನ್ನು ಕಿರಣ್​ ಬಿಚ್ಚಿಟ್ಟಿದ್ದಾರೆ. ಬಾಯ್​ಫ್ರೆಂಡ್​ ಮಾತು ಕೇಳಿ ಸಿನಿಮಾಗಳಿಂದ ಅಂತರ ಕಾಯ್ದುಕೊಂಡೆ. ಇದರಿಂದ ನಾಯಕಿಯಾಗುವ ಅವಕಾಶಗಳು ಕಡಿಮೆಯಾದವು. ಆ ನಂತರ ಬಾಯ್​ಫ್ರೆಂಡ್​ ಮಾತು ಕೇಳಿದ್ದು ತಪ್ಪು ಎಂದು ಅರಿವಾಯಿತು. ನಾನು ಮತ್ತೆ ನಟಿಸಲು ಆರಂಭಿಸಿದಾಗ ಕೆಲವರು ನನ್ನನ್ನು ದುರ್ಬಳಕೆ ಮಾಡಿಕೊಳ್ಳಲು ಯತ್ನಿಸಿದರು. ಅವಕಾಶಕ್ಕಾಗಿ ಮಂಚ ಏರುವಂತೆ ಕೇಳಿದರು. ಇಂಥಾ ಸಮಯದಲ್ಲೇ ಲವರ್​ ನನ್ನಿಂದ ದೂರವಾದನು ಎಂದು ಕಿರಣ್​ ಹೇಳಿದ್ದಾರೆ.

ದೂರವಾಗಲು ನಮ್ಮ ನಡುವೆ ಅಂಥಾ ದೊಡ್ಡ ಸಮಸ್ಯೆ ಏನು ಇರಲಿಲ್ಲ. ಸಣ್ಣ ಸಣ್ಣ ಸಮಸ್ಯೆಗಳಿಂದ ನಾವು ದೂರವಾದೆವು. ಆ ನಂತರವು ನಾನು ಆತನನ್ನು ಮರಳಿ ಸಂಪರ್ಕಿಸಲು ಯತ್ನಿಸಿದೆ. ಆತನನ್ನು ಕರೆದೆ. ತುಂಬಾ ಒತ್ತಾಯ ಮಾಡಿ ಕರೆದಾಗ, ಕೋಪದಲ್ಲೇ ಬಂದ ಆತ ನನ್ನ ಮೇಲೆ ಹಲ್ಲೆ ಮಾಡಿದನು. ಈ ವೇಳೆ ಹರಿದ ಬಟ್ಟೆಯಲ್ಲೇ ನಾನು ರಸ್ತೆ ಮೇಲೆ ಬಿದ್ದಿದೆ. ಅಂದೇ ಎಲ್ಲರೂ ನಕಲಿಗಳು ಎಂದು ಅನಿಸಿತು. ಎಲ್ಲರು ನನ್ನನ್ನು ದುರುಪಯೋಗಪಡಿಸಿಕೊಳ್ಳಲು ಪ್ರಯತ್ನಿಸಿದರು. ಕೆಲವರು ಮಧ್ಯ ರಾತ್ರಿ ನನಗೆ ಕರೆ ಮಾಡಿ ಕರೆಯುತ್ತಿದ್ದರು. ನನಗೆ ಒಳ್ಳೆಯ ಸ್ನೇಹಿತರು ಅಂತಾ ಯಾರೂ ಇಲ್ಲ ಎಂದು ಕಿರಣ್​ ಅಳಲು ತೋಡಿಕೊಂಡಿದ್ದಾರೆ.

ಅಂದಹಾಗೆ 41 ವರ್ಷದ ಕಿರಣ್​ ಈಗೀಗ ಕೆಲವು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಸಿನಿಮಾ ಹೊರತುಪಡಿಸಿ ಇನ್​ಸ್ಟಾಗ್ರಾಂನಲ್ಲಿ ಗ್ಲಾಮರಸ್​ ಫೋಟೋಗಳನ್ನು ಶೇರ್​ ಮಾಡುವ ಮೂಲಕ ಅಭಿಮಾನಿಗಳ ಮೈ ಬಿಸಿಯೇರಿಸುತ್ತಿರುತ್ತಾರೆ. ಕಿರಣ್​ ಅವರು ಇನ್​ಸ್ಟಾಗ್ರಾಂಗೆ ಸೀಮಿತವಾಗದೆ, ಆ್ಯಪ್​ ಒಂದನ್ನು ಆರಂಭಿಸಿ ಆ ಮೂಲಕ ಉದ್ಯಮಕ್ಕೂ ಕೈಹಾಕಿದ್ದಾರೆ. ಅಭಿಮಾನಿಗಳಿಗಾಗಿ kiran.celebgaze.in ಎಂಬ ಆ್ಯಪ್​ ಮತ್ತು ವೆಬ್​ಸೈಟ್​ ತೆರೆದಿದ್ದಾರೆ. ಮೊಬೈಲ್​ನಲ್ಲಿ ಈ ಆ್ಯಪ್​ ಡೌನ್​ಲೋಡ್​ ಮಾಡಿಕೊಳ್ಳಬೇಕಾದರೆ 49 ರೂ. ಪಾವತಿಸಬೇಕು. ಆ್ಯಪ್​ ಮೂಲಕ ನೀವು ಸಾವಿರಾರು ರೂಪಾಯಿ ಪಾವತಿಸಿದರೆ ಕಿರಣ್​ ಅವರು ಗ್ಲಾಮರಸ್​ ಫೋಟೋಗಳನ್ನು ಕಳುಹಿಸಲಿದ್ದಾರಂತೆ. ಈಗಾಗಲೇ ಹಣ ಪಡೆಯುವ ಮೂಲಕ ಅಭಿಮಾನಿಗಳಿಗೆ ತಮ್ಮ ಗ್ಲಾಮರಸ್​ ಅವತಾರವನ್ನು ಕಿರಣ್​ ರಾಥೋಡ್​ ಅನಾವರಣಗೊಳಿಸಿದ್ದಾರೆ. ಇನ್​ಸ್ಟಾಗ್ರಾಂನಲ್ಲಿ ಗ್ಲಾಮರಸ್​ ಫೋಟೋಗಳು ಸಣ್ಣ ಝಲಕ್​ ಅನ್ನು ಕಿರಣ್​ ಹರಿಬಿಡುತ್ತಿರುತ್ತಾರೆ. ಮತ್ತಷ್ಟು ಹಾಟ್​ ಅವತಾರಕ್ಕಾಗಿ ಆ್ಯಪ್​ ಮೊರೆ ಹೋಗಿ ಎಂದು ಪ್ರಚಾರ ಮಾಡುತ್ತಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net