ಮನಸಾಕ್ಷಿಯ ಕುರಿತಾದ 'ದಿ ಲಾಸ್ಟ್ ಕೇಸ್' ಬಿಡುಗಡೆ

The Lost Case (2)
Published on

ಬೆಂಗಳೂರು: ಜನಪ್ರಿಯ ಛಾಯಾಗ್ರಾಹಕ ಸತ್ಯ ಹೆಗಡೆ ಅವರು ತಮ್ಮ ಸತ್ಯ ಹೆಗಡೆ ಸ್ಟುಡಿಯೋಸ್​ ಎಂಬ ಯೂಟ್ಯೂಬ್​ ಚಾನಲ್​ನ ಮೂಲಕ ಕೆಲವು ಸದಭಿರುಚಿಯ ಕಿರುಚಿತ್ರಗಳನ್ನು ಬಿಡುಗಡೆ ಮಾಡುತ್ತಲೇ ಬಂದಿದ್ದಾರೆ. ಈಗಾಗಲೇ ಕೆಲವು ಕಿರುಚಿತ್ರಗಳು ಬಿಡುಗಡೆಯಾಗಿದ್ದು, ಈಗ 'ದಿ ಲಾಸ್ಟ್​ ಕೇಸ್​' ಎಂಬ ಇನ್ನೊಂದು ಹೊಸ ಚಿತ್ರವನ್ನು ಇತ್ತೀಚೆಗೆ ಬಿಡುಗಡೆ ಮಾಡಲಾಗಿದೆ.

ಎಲ್ಲಾ ಸಾಕ್ಷಿಗಿಂತ ಮನಸಾಕ್ಷಿಯೇ ದೊಡ್ಡದು ಎಂಬ ವಿಷಯವನ್ನು ಸಾರುವ ಈ ಚಿತ್ರ ಕಿರುಚಿತ್ರವನ್ನು ಪ್ರದೀಪ್ ಕೃಷ್ಣಮೂರ್ತಿ ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿದ್ದಾರೆ. ರಮೇಶ್​ ಪಂಡಿತ್​, ಶಂಕರ್ ಅಶ್ವತ್ಥ್, ಪುನೀತ್ ಬಾಬು, ಪ್ರದೀಪ್ ಅಂಚೆ ಮುಂತಾದವರು ಈ ಕಿರುಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ವಾಸುದೇವ ಮೂರ್ತಿ ಕಥೆ ಬರೆದಿರುವ 'ದಿ ಲಾಸ್ಟ್​ ಕೇಸ್​'ಗೆ ಗಿರೀಶ್ ಸಂಗೀತ ನೀಡಿದ್ದಾರೆ. ರಂಗನಾಥ್ ಛಾಯಾಗ್ರಹಣ ಹಾಗೂ ಉಜ್ವಲ್ ಸಂಕಲನ ಈ ಕಿರುಚಿತ್ರಕ್ಕಿದೆ.‌

'ನನಗೆ ಈ ಕಿರುಚಿತ್ರದ ಕಥೆ ಬಹಳ‌ ಮೆಚ್ಚುಗೆಯಾಯಿತು.‌ ಅಪರಾಧಿಯೊಬ್ಬ ನಾನೇ ಕೊಲೆಗಾರ ಎಂದು‌ ಹೇಳಿ ಪೊಲೀಸರ ಬಳಿ‌ ಶರಣಾಗುವ ವಿಷಯ ಬಹಳ ಮನಸ್ಸಿಗೆ ಹತ್ತಿರವಾಯಿತು' ಎನ್ನುತ್ತಾರೆ ಈ ಕಿರುಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ಹಿರಿಯ ನಟ ರಮೇಶ್ ಪಂಡಿತ್.

'ದಿ ಲಾಸ್ಟ್ ಕೇಸ್' ಕಿರುಚಿತ್ರ ಬಹಳ ಚೆನ್ನಾಗಿ ಮೂಡಿಬಂದಿದೆ ಎನ್ನುವ ಸತ್ಯ ಹೆಗಡೆ, ಆದಷ್ಟು ಬೇಗ ಈ ತಂಡದಿಂದ ಹಿರಿತೆರೆಯಲ್ಲಿ ಚಿತ್ರ ಮೂಡಿಬರಲಿ ಎಂದು ಹಾರೈಸುತ್ತಾರೆ.

ಇತ್ತೀಚೆಗೆ ಈ ಕಿರುಚಿತ್ರದ ವಿಶೇಷ ಪ್ರದರ್ಶನವಿದ್ದು, ಈ ಸಂದರ್ಭದಲ್ಲಿ ಹಿರಿಯ ನಿರ್ದೇಶಕ ಚಿಂದೋಡಿ ಬಂಗಾರೇಶ್, ಸಾಹಿತಿ ಕವಿರಾಜ್, ಸಂಭಾಷಣೆಕಾರ ಮಾಸ್ತಿ ಮಂಜುನಾಥ್​ ಮುಂತಾದವರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net