ಪ್ಲೀಸ್​ ಈ ಒಂದು ಪಾತ್ರ ಕೊಡಿ: ಮಾಧ್ಯಮಗಳ ಮುಂದೆಯೇ ಮನವಿ ಮಾಡಿಕೊಂಡ ನಟಿ ವರಲಕ್ಷ್ಮೀ

Varalakshmi
Published on

ಹೈದರಾಬಾದ್​: ಕಾಲಿವುಡ್​ ಹಿರಿಯ ನಟ ಶರತ್​ಕುಮಾರ್​ ಅವರ ಹಿರಿಯ ಪುತ್ರಿ 37 ವರ್ಷದ ನಟಿ ವರಲಕ್ಷ್ಮೀ ಶರತ್‌ಕುಮಾರ್ ದಕ್ಷಿಣ ಭಾರತದ ಸಿನಿ ಇಂಡಸ್ಟ್ರಿಯಲ್ಲಿ ತಮ್ಮದೇ ಆದ ಹೆಸರನ್ನು ಮಾಡಿದ್ದಾರೆ. ಪೂರ್ಣ ಪ್ರಮಾಣದ ನಾಯಕಿ ಅಲ್ಲದಿದ್ದರೂ, ಖಳನಾಯಕಿ ಮತ್ತು ಪೋಷಕ ಪಾತ್ರದಿಂದಲೇ ವರು ತುಂಬಾ ಹೆಸರು ಮಾಡಿದ್ದಾರೆ. ಕೆಲ ಚಿತ್ರಗಳಲ್ಲಿ ನಾಯಕಿಯಾಗಿಯೂ ನಟಿಸಿದ್ದಾರೆ.

ಕ್ರ್ಯಾಕ್’ ಮತ್ತು ‘ನಾಂದಿ’ಯಂತಹ ತೆಲುಗು ಸಿನಿಮಾಗಳಲ್ಲಿ ನಟಿಸಿ ಬ್ಯಾಕ್ ಟು ಬ್ಯಾಕ್ ಹಿಟ್ ಕೊಟ್ಟಿರುವ ವರು ತೆಲುಗು ಚಿತ್ರರಂಗದಲ್ಲಿ ಉತ್ತಮ ಯಶಸ್ಸನ್ನು ಕಂಡಿದ್ದಾರೆ. ಅಲ್ಲದೆ, ಟಾಲಿವುಡ್​ನಿಂದ ಸಿಕ್ಕಾಪಟ್ಟೆ ಆಫರ್‌ಗಳು ಬರುತ್ತಿವೆ ಮತ್ತು ಪ್ರಸ್ತುತ ಸಮಂತಾ ನಟನೆಯ ‘ಯಶೋಧಾ’, ಸಂದೀಪ್ ಕಿಶನ್ ಅವರ ‘ಮೈಕೆಲ್’, ‘ಹನುಮಾನ್’ ಮತ್ತು ‘ಆದ್ಯ’ ಚಿತ್ರಗಳಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ. ಟಾಲಿವುಡ್​ನಲ್ಲಿ ಹಿಟ್​ ಸಿನಿಮಾಗಳು ಮತ್ತು ಸಿಕ್ಕಾಪಟ್ಟೆ ಆಫರ್​ಗಳು ಬರುತ್ತಿರುವುದರಿಂದ ವರು ಇತ್ತೀಚೆಗಷ್ಟೇ ಚೆನ್ನೈ ಬಿಟ್ಟು ಹೈದರಾಬಾದ್‌ನಲ್ಲಿ ನೆಲೆಸಿದ್ದಾರೆ.

ಇದೀಗ ಮಾಧ್ಯಮ ಸಂದರ್ಶನದಲ್ಲಿ ಮಾತನಾಡಿರುವ ವರು, ತಮ್ಮ ಬಹುದಿನದ ಬಯಕೆ ಒಂದನ್ನು ವ್ಯಕ್ತಪಡಿಸಿದ್ದಾರೆ. ಕಾಮಿಡಿ ಸಿನಿಮಾಗಳಲ್ಲಿ ನಟಿಸಬೇಕೆಂಬುದು ನನ್ನ ಬಹು ದಿನದ ಆಸೆ. ಆದರೆ, ಈವರೆಗೂ ನಾನು ಯಾವುದೇ ಅವಕಾಶಗಳು ಬಂದಿಲ್ಲ. ಎಲ್ಲವು ಕೂಡ ಬರೀ ಖಳನಾಯಕಿ ಪಾತ್ರಗಳೇ ಬರುತ್ತಿವೆ. ದಯವಿಟ್ಟು ಕಾಮಿಡಿ ಸಿನಿಮಾಗಳಲ್ಲಿ ನಟಿಸುವ ಒಂದು ಅವಕಾಶ ಕೊಡಿ ಎಂದು ವರು ಮನವಿ ಮಾಡಿಕೊಂಡಿದ್ದಾರೆ.

ಅಂದಹಾಗೆ ವರು ನಟ ಸುದೀಪ್​ ಅಭಿನಯದ ಮಾಣಿಕ್ಯ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದರು. ಕಳೆದ ಮಾರ್ಚ್​ 5ರಂದು ಹುಟ್ಟುಹಬ್ಬ ಹಿನ್ನೆಲೆಯಲ್ಲಿ ವರು ಅಭಿನಯದ ಹನುಮಾನ್​ ಚಿತ್ರದ ವರು ಪೋಸ್ಟರ್​ ಅನ್ನು ಸುದೀಪ್​ ಅವರೇ ಬಿಡುಗಡೆ ಮಾಡಿ ಶುಭ ಕೋರಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net