

ಚೆನ್ನೈ: ಇಳಯ ದಳಪತಿ ವಿಜಯ್ ಅಭಿನಯದ ಲಿಯೋ ಸಿನಿಮಾ ಇದೇ ತಿಂಗಳು 19ರಂದು ಬಿಡುಗಡೆಯಾಗಲಿದ್ದು, ಸಿನಿಮಾ ಮೇಲೆ ನಿರೀಕ್ಷೆ ಬೆಟ್ಟದಷ್ಟಿದೆ. ಅದರಲ್ಲೂ ಅಭಿಮಾನಿಗಳಂತೂ ತುದಿಗಾಲಲ್ಲಿ ನಿಂತು ಕಾಯುತ್ತಿದ್ದಾರೆ.
ಕೈದಿ, ಮಾಸ್ಟರ್, ವಿಕ್ರಮ್ ಸಿನಿಮಾಗಳ ಭರ್ಜರಿ ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ನಿರ್ದೇಶಕ ಲೋಕೇಶ್ ಕನಗರಾಜ್ ಅವರೇ ಲಿಯೋ ಸಿನಿಮಾವನ್ನು ನಿರ್ದೇಶನ ಮಾಡಿದ್ದು, ಸಹಜವಾಗಿಯೇ ಈ ಸಿನಿಮಾದ ಮೇಲೆ ಭಾರೀ ನಿರೀಕ್ಷೆ ಇದೆ.
ಇತ್ತೀಚೆಗಷ್ಟೇ ಈ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರೀ ಸಂಚಲನ ಮೂಡಿಸಿದೆ. ಕೋಟಿಗಟ್ಟಲೆ ವೀಕ್ಷಣೆ ಪಡೆದುಕೊಂಡು, ಇಂದಿಗೂ ಕಾಲಿವುಡ್ನಲ್ಲಿ ಹೆಚ್ಚು ಚರ್ಚೆಯಲ್ಲಿರುವ ಸಿನಿಮಾವಾಗಿದೆ. ಈ ಸಿನಿಮಾದಲ್ಲಿ ಇಳಯದಳಪತಿ ವಿಜಯ್ ಹೊರತುಪಡಿಸಿ, ಬಾಲಿವುಡ್ ನಟ ಸಂಜಯ್ ದತ್, ಆ್ಯಕ್ಸನ್ ಕಿಂಗ್ ಅರ್ಜುನ್ ಸರ್ಜಾ, ನಟಿ ತ್ರಿಶಾ, ಅರ್ಜುನ್ ದಾಸ್, ಫಾಹದ್ ಫಾಸಿಲ್, ನವಿನ್ ಪೌಲಿ, ಗೌತಮ್ ವಾಸುದೇವ್ ಮೆನನ್ ಸೇರಿದಂತೆ ಬಹುತಾರಾಗಣವಿದೆ.
ಆದರೆ, ಸಿನಿಮಾ ಟ್ರೈಲರ್ನಲ್ಲಿ ಅಭಿಮಾನಿಗಳಿಗೆ ವಿಶೇಷವಾಗಿ ಗಮನ ಸೆಳೆದಿದ್ದು ಕತ್ತೆಕಿರುಬ. ಇದೀಗ ಇದೇ ಕತ್ತೆಕಿರುಬಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಮುಹಿಲ್ ತಲೈವಾ ಹೆಸರಿನ ಎಕ್ಸ್ ಖಾತೆಯಲ್ಲಿ ವಿಡಿಯೋ ಶೇರ್ ಮಾಡಿಕೊಳ್ಳಲಾಗಿದ್ದು, ಅದರಲ್ಲಿ ಕತ್ತೆಕಿರುವ ಲಿಯೋ ಸಿನಿಮಾದ ಕೆಲಸದ ಅನುಭವವನ್ನು ಹಂಚಿಕೊಂಡಿದೆ.
ಇದು ಸಾಧ್ಯನಾ ಎಂದು ನೀವು ಹುಬ್ಬೇರಿಸಬಹುದು. ಆದರೆ, ವಿಡಿಯೋ ಎಡಿಟಿಂಗ್ ಮೂಲಕ ಕತ್ತೆಕಿರುಬ ಮಾತನಾಡಿದೆ ಎನ್ನುವಂತೆ ವಿಡಿಯೋವನ್ನು ಎಡಿಟ್ ಮಾಡಿ ಜಾಲತಾಣದಲ್ಲಿ ಹರಿಬಿಡಲಾಗಿದ್ದು, ಇದೀಗ ಆ ವಿಡಿಯೋ 1.60 ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದೆ. 3 ಸಾವಿರ ಮಂದಿ ವಿಡಿಯೋವನ್ನು ಲೈಕ್ ಸಹ ಮಾಡಿದ್ದಾರೆ.
ಸಂದರ್ಶನದಲ್ಲಿ ಏನಿದೆ? ಲಿಯೋ ಸಿನಿಮಾದಲ್ಲಿ ನಟಿಸಿದ್ದು ಎಂದು ಮರೆಯಲಾಗದ ಅನುಭವವಾಗಿದೆ. ದಿ ಲಯನ್ ಕಿಂಗ್ ಸಿನಿಮಾದಲ್ಲಿ ಒಂದು ಕೂಟವಾಗಿ ನಟಿಸಿದ ನನಗೆ ಲಿಯೋ ಸಿನಿಮಾದಲ್ಲಿ ವಿಶೇಷ ಪಾತ್ರವನ್ನೇ ನೀಡಲಾಗಿದೆ. ಈ ಸಿನಿಮಾದಲ್ಲಿ ನಟ ವಿಜಯ್ ಅವರ ಜತೆ ನಟಿಸಿದ್ದು ಇಂದಿಗೂ ನನ್ನ ಕಣ್ಣ ಮುಂದೆಯೇ ಇದೆ ಎಂದು ಕತ್ತೆಕಿರುಬ ಅಭಿಪ್ರಾಯ ವ್ಯಕ್ತಪಡಿಸಿದೆ ಎಂಬಂತೆ ಹಿನ್ನೆಲೆ ಧ್ವನಿಯನ್ನು ನೀಡಿ ವಿಡಿಯೋವನ್ನು ಎಡಿಟ್ ಮಾಡಲಾಗಿದೆ.
ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸಂಚಲನ ಮೂಡಿಸಿದೆ. ಇದು ಕೂಡ ಚಿತ್ರದ ಪ್ರಚಾರಕ್ಕೆ ಪಾಸಿಟಿವ್ ಆಗಲಿದೆ ಎಂಬ ಅಭಿಪ್ರಾಯಗಳನ್ನು ಅಭಿಮಾನಿಗಳು ಹೊರಹಾಕಿದ್ದಾರೆ. ಅ.19ರಂದು ತೆರೆಕಾಣುವ ವಿಜಯ್ ಸಿನಿಮಾ ಯಾವೆಲ್ಲಾ ದಾಖಲೆಗಳನ್ನು ಮುರಿಯಲಿದೆ ಎಂಬುದನ್ನು ಕಾದು ನೋಡಬೇಕಿದೆ. ವಿಜಯ್ ಅವರು ಕೊನೆಯದಾಗಿ ವಾರಿಸು ಸಿನಿಮಾದಲ್ಲಿ ನಟಿಸಿದ್ದರು. (ಏಜೆನ್ಸೀಸ್)