

ನವದೆಹಲಿ: ಅ.14ರಂದು ನಿಗದಿಯಾಗಿರುವ ಪಾಕಿಸ್ತಾನ ವಿರುದ್ಧದ ಹೈವೋಲ್ಟೇಜ್ ಪಂದ್ಯದ ತಯಾರಿಗೆಂದು ಭಾರತ ತಂಡ ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣಕ್ಕೆ ಬಂದಿಳಿದಿದೆ. ಡೆಂಘೆ ಜ್ವರ ಕಾರಣದಿಂದ ಆಸ್ಟ್ರೇಲಿಯಾ ಮತ್ತು ಅಫ್ಘಾನಿಸ್ತಾನ ವಿರುದ್ಧದ ಎರಡೂ ಪಂದ್ಯಗಳಿಗೆ ಅಲಭ್ಯರಾಗಿದ್ದ ಶುಭಮನ್ ಗಿಲ್ ಇದೀಗ ಚೆನ್ನೈನಿಂದ ಅಹಮದಾಬಾದ್ಗೆ ಬಂದಿಳಿದಿರುವುದು ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ.
ಗಿಲ್ ಅವರು ಚೆನ್ನೈ ಆಸ್ಪತ್ರೆಗೆ ದಾಖಲಾಗಿದ್ದರು. ಇದೀಗ ಜ್ವರದಿಂದ ಚೇತರಿಸಿಕೊಂಡಿದ್ದರೂ ಪಾಕ್ ವಿರುದ್ಧ ಆಡುತ್ತಾರಾ? ಇಲ್ಲವಾ? ಎಂಬ ಅನಿಶ್ಚಿತತೆ ಹಾಗೇ ಮುಂದುವರಿದಿದೆ. ಗಿಲ್ ಲಭ್ಯತೆ ಬಗ್ಗೆ ತಂಡದಿಂದ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಆದರೆ, ಅಹಮದಾಬಾದ್ಗೆ ಅವರ ಆಗಮನವು ಕ್ರೀಡಾಭಿಮಾನಿಗಳಿಗೆ ಹೊಸ ಭರವಸೆ ಉಂಟು ಮಾಡಿರುವುದಂತೂ ಸತ್ಯ.
ಅದ್ಭುತ ಫಾರ್ಮ್ನಲ್ಲಿರುವ ಗಿಲ್
ಗಿಲ್ 2023ರಲ್ಲಿ ಒಳ್ಳೆಯ ಬ್ಯಾಟಿಂಗ್ ಪ್ರದರ್ಶನವನ್ನು ನೀಡಿದ್ದಾರೆ. ಕೇವಲ 20 ಏಕದಿನ ಪಂದ್ಯಗಳನ್ನು ಆಡಿರುವ ಗಿಲ್, 1230 ರನ್ಗಳೊಂದಿಗೆ ಈ ವರ್ಷ ಮುಂಚೂಣಿಯಲ್ಲಿ ಇರುವ ರನ್ ಸ್ಕೋರರ್ ಎನಿಸಿಕೊಂಡಿದ್ದಾರೆ. 72.35 ರನ್ ಸರಾಸರಿಯೊಂದಿಗೆ 105.03 ಸ್ಟ್ರೈಕ್ ರೇಟ್ ಅನ್ನು ಹೊಂದಿದ್ದಾರೆ. ಐದು ಶತಕ ಮತ್ತು ಐದು ಅರ್ಧ ಶತಕಗಳೊಂದಿಗೆ ಒಂದೇ ವರ್ಷದಲ್ಲಿ ಐದು ಅಥವಾ ಅದಕ್ಕಿಂತ ಹೆಚ್ಚು ಶತಕಗಳನ್ನು ಬಾರಿಸಿರುವ ಭಾರತೀಯ ಅಗ್ರಗಣ್ಯ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಗಿಲ್ ಸ್ಥಾನ ಪಡೆದಿದ್ದಾರೆ. ಈ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಮತ್ತು ಸಚಿನ್ ತೆಂಡೂಲ್ಕರ್ ಇದ್ದಾರೆ. ಇತ್ತೀಚೆಗಷ್ಟೇ ಮುಕ್ತಾಯವಾದ ಏಷ್ಯಾ ಕಪ್ನಲ್ಲೂ ಗಿಲ್ ಒಳ್ಳೆಯ ರನ್ ಕಲೆಹಾಕಿದರು. ತಮ್ಮ ಹೆಸರಿನಲ್ಲಿ 302 ರನ್ ದಾಖಲಿಸಿದ ಗಿಲ್, ಐಸಿಸಿ ಏಕದಿನ ಬ್ಯಾಟ್ಸ್ಮೆನ್ಗಳ ಪಟ್ಟಿಯಲ್ಲಿ ನಂ.1 ಸ್ಥಾನವನ್ನು ಅಲಂಕರಿಸಿದ್ದಾರೆ. ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರು ಒಂದೇ ವರ್ಷದಲ್ಲಿ ಗಳಿಸಿದ 1894 ರನ್ಗಳ ವಿಶ್ವದಾಖಲೆಯನ್ನು ಮುರಿಯಲು ಈ ಕ್ಯಾಲೆಂಡರ್ ವರ್ಷದಲ್ಲಿ ಗಿಲ್ ಅವರಿಗೆ 665 ರನ್ ಮಾತ್ರ ಬಾಕಿ ಇದೆ.
ಗಿಲ್ ಆರೋಗ್ಯವಾಗಿದ್ದಾರೆ ಎಂದು ಬಿಸಿಸಿಐ ಮೂಲವು ಈ ಹಿಂದೆಯೇ ಸೂಚಿಸಿತ್ತು ಆದರೆ ಅವರು ಪಾಕಿಸ್ತಾನದ ವಿರುದ್ಧದ ಪಂದ್ಯದ ಭಾಗವಾಗುತ್ತಾರೆಯೇ ಎಂಬುದು ಖಚಿತವಾಗಿಲ್ಲ. ಪಂದ್ಯ ನಡೆಯಲು ಇನ್ನೂ ಎರಡು ದಿನ ಬಾಕಿ ಇರುವುದರಿಂದ ಸದ್ಯ ಏನನ್ನೂ ಊಹಿಸಲು ಆಗುವುದಿಲ್ಲ. ಗಿಲ್ ಕ್ರೀಡಾಂಗಣಕ್ಕೆ ಇಳಿದರೂ ಅಚ್ಚರಿಪಡಬೇಕಿಲ್ಲ.
ಒಂದು ವೇಳೆ ಗಿಲ್ ಈ ಬಾರಿಯು ಪಂದ್ಯದಿಂದ ಹೊರಗೆ ಉಳಿದರೆ, ಇಶಾನ್ ಕಿಶಾನ್ಗೆ ಮತ್ತೊಮ್ಮೆ ಆರಂಭಿಕ ಆಟಗಾರನಾಗಿ ಕಣಕ್ಕಿಳಿಯುವ ಅವಕಾಶ ಸಿಗಲಿದೆ. ಆಸ್ಟ್ರೇಲಿಯಾ ವಿರುದ್ಧ ನಡೆದ ತಂಡದ ಮೊದಲ ಪಂದ್ಯದಲ್ಲಿ ಇಶಾನ್ ಕಿಶಾನ್ ಶೂನ್ಯಕ್ಕೆ ಔಟಾಗುವ ಮೂಲಕ ನಿರಾಸೆ ಮೂಡಿಸಿದ್ದರು. ನಿನ್ನೆ ಆಫ್ಘಾನ್ ವಿರುದ್ಧ ನಡೆದ ಪಂದ್ಯದಲ್ಲಿ 47 ರನ್ ಬಾರಿಸುವ ಮೂಲಕ ಕೊಂಚ ಭರವಸೆ ಮೂಡಿಸಿದ್ದಾರೆ. (ಏಜೆನ್ಸೀಸ್)