More

    ಇಶಾನ್​​ಗೆ ಒಲಿಯಲಿದೆಯಾ ಓಪನಿಂಗ್​ ಅದೃಷ್ಟ​? ಜಾರ್ಖಂಡ್ ಆಟಗಾರನ​ ಟ್ರ್ಯಾಕ್​ ರೆಕಾರ್ಡ್​ ಹೀಗಿದೆ ನೋಡಿ….

    ಚೆನ್ನೈ: ವಿಶ್ವಕಪ್​ ಆರಂಭವಾಗಿ ಎರಡು ದಿನ ಕಳೆದಿದೆ. ಆದರೆ, ಆತಿಥೇಯ ಭಾರತದ ಪಂದ್ಯಕ್ಕಾಗಿ ಕ್ರೀಡಾಭಿಮಾನಿಗಳು ಎದುರು ನೋಡುತ್ತಿದ್ದಾರೆ. ನಾಳೆ ಭಾರತ ಮತ್ತು ಆಸ್ಟ್ರೇಲಿಯಾ ಮುಖಾಮುಖಿಯಾಗಲಿವೆ. ಉಭಯ ತಂಡಗಳಿಗೂ ಇದು ಪ್ರಸಕ್ತ ಟೂರ್ನಿಯ ಮೊದಲ ಪಂದ್ಯವಾಗಿದ್ದು, ಚೆನ್ನೈನ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯಲಿದೆ. ಆದರೆ, ಟೂರ್ನಿಯ ಆರಂಭಕ್ಕೂ ಮುನ್ನವೆ ಭಾರತಕ್ಕೆ ಶಾಕ್​ ಒಂದು ಎದುರಾಗಿದೆ. ಶುಭಮನ್​ ಗಿಲ್​ ಡೆಂಘೆ ಜ್ವರ ಶಂಕೆ ಇದ್ದು, ಅವರು ಅಲಭ್ಯರಾಗುವ ಸಾದ್ಯತೆ ಇದೆ. ಒಂದು ವೇಳೆ ಗಿಲ್​ ಹೊರಗುಳಿದರೆ ಆರಂಭಿಕ ಆಟಗಾರನಾಗಿ ಕಣಕ್ಕಿಳಿಯುವ ಭಾಗ್ಯ ಇಶಾನ್​ ಕಿಶಾನ್​ಗೆ ಒಲಿಯಲಿದೆ.

    ಅದ್ಭುತ ಫಾರ್ಮ್​ನಲ್ಲಿರುವ ಗಿಲ್​

    ಆರಂಭಿಕ ಸ್ಥಾನಕ್ಕೆ ಮೊದಲೇ ನಿಗದಿಪಡಿಸಿದ ಆಟಗಾರನನ್ನು ಕಳೆದುಕೊಳ್ಳುವುದು ಸುಲಭವಲ್ಲ. ಏಕೆಂದರೆ, ಗಿಲ್​ ಅವರು ಸತತ ಒಂದು ತಿಂಗಳುಗಳ ಕಾಲ ತಯಾರಿ ನಡೆಸಿದ್ದರು. ಅಲ್ಲದೆ, ಗಿಲ್​ 2023ರಲ್ಲಿ ಒಳ್ಳೆಯ ಬ್ಯಾಟಿಂಗ್​ ಪ್ರದರ್ಶನವನ್ನು ನೀಡಿದ್ದಾರೆ. ಕೇವಲ 20 ಏಕದಿನ ಪಂದ್ಯಗಳನ್ನು ಆಡಿರುವ ಗಿಲ್​, 1230 ರನ್​ಗಳೊಂದಿಗೆ ಈ ವರ್ಷ ಮುಂಚೂಣಿಯಲ್ಲಿ ಇರುವ ರನ್​ ಸ್ಕೋರರ್​ ಎನಿಸಿಕೊಂಡಿದ್ದಾರೆ. 72.35 ರನ್​ ಸರಾಸರಿಯೊಂದಿಗೆ 105.03 ಸ್ಟ್ರೈಕ್​ ರೇಟ್​ ಅನ್ನು ಹೊಂದಿದ್ದಾರೆ. ಇಂತಹ ಆಟಗಾರನನ್ನು ಮೊದಲ ಪಂದ್ಯದಲ್ಲಿ ಮಿಸ್​ ಮಾಡಿಕೊಳ್ಳುವುದೆಂದರೆ ತಂಡಕ್ಕ ಅದು ಒಂದು ದೊಡ್ಡ ಹೊಡೆತ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ.

    Gill 1

    5 ಶತಕ 5 ಅರ್ಧ ಶತಕ

    ಐದು ಶತಕ ಮತ್ತು ಐದು ಅರ್ಧ ಶತಕಗಳೊಂದಿಗೆ ಒಂದೇ ವರ್ಷದಲ್ಲಿ ಐದು ಅಥವಾ ಅದಕ್ಕಿಂತ ಹೆಚ್ಚು ಶತಕಗಳನ್ನು ಬಾರಿಸಿರುವ ಭಾರತೀಯ ಅಗ್ರಗಣ್ಯ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಗಿಲ್​ ಸ್ಥಾನ ಪಡೆದಿದ್ದಾರೆ. ಈ ಪಟ್ಟಿಯಲ್ಲಿ ವಿರಾಟ್​ ಕೊಹ್ಲಿ ಮತ್ತು ಸಚಿನ್​ ತೆಂಡೂಲ್ಕರ್​ ಇದ್ದಾರೆ. ಇತ್ತೀಚೆಗಷ್ಟೇ ಮುಕ್ತಾಯವಾದ ಏಷ್ಯಾ ಕಪ್​ನಲ್ಲೂ ಗಿಲ್​ ಒಳ್ಳೆಯ ರನ್​ ಕಲೆಹಾಕಿದರು. ತಮ್ಮ ಹೆಸರಿನಲ್ಲಿ 302 ರನ್​ ದಾಖಲಿಸಿದ ಗಿಲ್​, ಐಸಿಸಿ ಏಕದಿನ ಬ್ಯಾಟ್ಸ್​ಮೆನ್​ಗಳ ಪಟ್ಟಿಯಲ್ಲಿ ನಂ.1 ಸ್ಥಾನವನ್ನು ಅಲಂಕರಿಸಿದ್ದಾರೆ. ಕ್ರಿಕೆಟ್​ ದಿಗ್ಗಜ ಸಚಿನ್​ ತೆಂಡೂಲ್ಕರ್​ ಅವರು ಒಂದೇ ವರ್ಷದಲ್ಲಿ ಗಳಿಸಿದ 1894 ರನ್​ಗಳ ವಿಶ್ವದಾಖಲೆಯನ್ನು ಮುರಿಯಲು ಈ ಕ್ಯಾಲೆಂಡರ್​ ವರ್ಷದಲ್ಲಿ ಗಿಲ್​ ಅವರಿಗೆ 665 ರನ್​ ಮಾತ್ರ ಬಾಕಿ ಇದೆ.

    ಆರೋಗ್ಯ ಸ್ಥಿತಿಯ ಬಗ್ಗೆ ಇನ್ನೂ ಖಚಿತವಾಗಿಲ್ಲ

    ಗಿಲ್​ ಅವರನ್ನು ವೈದ್ಯಕೀಯ ತಂಡವು ಸೂಕ್ಷ್ಮವಾಗಿ ಗಮನಿಸುತ್ತಿದೆ. ಅವರು ಶೀಘ್ರದಲ್ಲೇ ಗುಣಮುಖರಾಗುತ್ತಾರೆಂದು ನಾವು ಭಾವಿಸುತ್ತೇವೆ. ವೈದ್ಯಕೀಯ ತಂಡದಿಂದ ಹೆಚ್ಚಿನ ಮಾಹಿತಿಗಾಗಿ ನಾವು ಕಾಯಬೇಕಾಗಿದೆ ಎಂದು ಬಿಸಿಸಿಐ ತಿಳಿಸಿದೆ. ಡೆಂಘೆಯಿಂದ ಚೇತರಿಸಿಕೊಂಡು ಮತ್ತೊಮ್ಮೆ ಆಟದಲ್ಲಿ ಹೊಂದಿಕೊಳ್ಳಲು ಗಿಲ್​ ಅವರಿಗೆ 7 ರಿಂದ 10 ದಿನಗಳನ್ನು ತೆಗೆದುಕೊಳ್ಳುತ್ತದೆ. ಆದಾಗ್ಯೂ, ಬಿಳಿರಕ್ತಕಣಗಳ ಸಂಖ್ಯೆಯಲ್ಲಿ ಗಮನಾರ್ಹ ಕುಸಿತ ಕಂಡುಬಂದರೆ, ಅದು ಇನ್ನೂ ಹೆಚ್ಚಿನ ಸಮಯ ತೆಗೆದುಕೊಳ್ಳಬಹುದು ಎಂದು ಹೇಳಲಾಗಿದೆ. ನಾಳೆ ಪಂದ್ಯ ನಡೆಯಲಿದ್ದು, ಗಿಲ್​ ಆಡ್ತಾರಾ ಅಥವಾ ಇಲ್ಲವಾ ಎಂಬುದು ಇಂದು ಸಂಜೆ ಒಳಗೆ ಖಚಿತವಾಗುವ ಸಾಧ್ಯತೆ ಇದೆ.

    Ishan 1

    ಜಾರ್ಖಂಡ್​ ಆಟಗಾರನಿಗೆ ಒಲಿಯಲಿದೆಯಾ ಅದೃಷ್ಟ?

    ಒಂದು ವೇಳೆ ಗಿಲ್​ ಲಭ್ಯವಾಗದಿದ್ದರೆ ಆ ಸ್ಥಾನವನ್ನು ಇಶಾನ್​ ಕಿಶಾನ್​ ತುಂಬಲಿದ್ದಾರೆ ಎಂದು ಹೇಳಲಾಗುತ್ತಿದೆ. ಜಾರ್ಖಂಡ್​ ಮೂಲದ ಆಟಗಾರರ ಕಳೆದ ಎರಡು ದಿನಗಳಿಂದ ತಮ್ಮ ಬ್ಯಾಟಿಂಗ್​ ಅಭ್ಯಾಸದ ಅವಧಿಯನ್ನು ವಿಸ್ತರಿಸಿದ್ದಾರೆ. ವಿಕೆಟ್‌ಕೀಪರ ಕಮ್​ ಬ್ಯಾಟ್ಸ್‌ಮನ್ ಆಗಿರುವ ಇಶಾನ್​, ಆಕ್ರಮಣಕಾರಿ ಆಟದ ಮೂಲಕ ಹೆಸರು ಗಳಿಸಿದ್ದಾರೆ. ಐಪಿಎಲ್ ಟೂರ್ನಿ ನೀಡಿದ ವೇದಿಕೆಯನ್ನು ಇಶಾನ್​ ಅದ್ಭುತವಾಗಿ ಬಳಸಿಕೊಳ್ಳುವ ಮೂಲಕಮ ಒಳ್ಳೆಯ ಹೆಸರು ಮಾಡಿದ್ದಾರೆ.

    ಟ್ರ್ಯಾಕ್​ ರೆಕಾರ್ಡ್​ ಹೇಗಿದೆ?

    ಇಶಾನ್​ ಕಿಶಾನ್​ ಅವರು ಇದುವರೆಗೂ 25 ಏಕದಿನ ಪಂದ್ಯಗಳನ್ನು ಆಡಿದ್ದು, 44.3 ರನ್​ ಸರಾಸರಿಯೊಂದಿಗೆ 886 ರನ್​ ಕಲೆಹಾಕಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್​ ಬೀಸಿರುವ ಇಶಾನ್​, 7 ವಿಶೇಷ ಸಂದರ್ಭದಲ್ಲಿ ಆರಂಭಿಕರಾಗಿ ಕಣಕ್ಕಿಳಿದ್ದಿದ್ದು, 74.66 ರನ್​ ಸರಾಸರಿಯೊಂದಿಗೆ 448 ರನ್​ ಗಳಿಸಿ, ಆರಂಭಿಕ ಸ್ಥಾನಕ್ಕೂ ರೆಡಿ ಎಂಬುದನ್ನು ಸಾಬೀತು ಮಾಡಿದ್ದಾರೆ. ಟಿ20 ಮಾದರಿ ಪಂದ್ಯದಲ್ಲೂ ಇಶಾನ್​ ಕಿಶಾನ್​ ಅವರು ಒಳ್ಳೆಯ ನಿರ್ವಹಣೆ ತೋರಿದ್ದಾರೆ. 29 ಪಂದ್ಯಗಳನ್ನು ಆಡಿರುವ ಇಶಾನ್​, 24.5 ರನ್​ ಸರಾಸರಿಯೊಂದಿಗೆ 686 ರನ್​ ಕಲೆಹಾಕಿದ್ದಾರೆ. ಟಿ20ಯಲ್ಲಿ 4 ಅರ್ಧ ಶತಕಗಳನ್ನು ಸಿಡಿಸಿದ್ದಾರೆ. ಐಪಿಎಲ್​ನಲ್ಲಿ 91 ಪಂದ್ಯಗಳನ್ನು ಆಡಿದ್ದು, 29.42 ರನ್​ ಸರಾಸರಿಯಲ್ಲಿ 15 ಅರ್ಧಶತಕದೊಂದಿಗೆ 2324 ರನ್​ ಗಳಿಸಿದ್ದಾರೆ. ಕೇವಲ ಎರಡು ಟೆಸ್ಟ್​ ಪಂದ್ಯ ಆಡಿರುವ ಇಶಾನ್​, 78.0 ರನ್​ ಸರಾಸರಿಯಲ್ಲಿ ಒಂದು ಅರ್ಧ ಶತಕದೊಂದಿಗೆ 78 ರನ್​ ಕಲೆಹಾಕಿದ್ದಾರೆ.

    ಆರಂಭಿಕ ಆಟಗಾರನಾಗಿ ದ್ವಿಶತಕ

    ಕಳೆದ ವರ್ಷ ಡಿಸೆಂಬರ್​ ತಿಂಗಳಲ್ಲಿ ಬಾಂಗ್ಲಾದೇಶದ ವಿರುದ್ಧ ನಡೆದ ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕಿಳಿದಿದ್ದ ಇಶಾನ್​ ಕಿಶಾನ್​, ಕೇವಲ 131 ಎಸೆತಗಳಲ್ಲಿ 210 ರನ್ ಗಳಿಸುವ ಮೂಲಕ ದ್ವಿಶಕ ಸಾಧನೆ ಮಾಡಿದರು. ಈ ಪಂದ್ಯದಲ್ಲಿ ಇಶಾನ್​, ಶಿಖರ್​ ಧವನ್​ ಅವರೊಂದಿಗೆ ಆರಂಭಿಕರಾಗಿ ಕಣಕ್ಕಿಳಿದಿದ್ದರು. 210 ರನ್​ಗಳಲ್ಲಿ 24 ಬೌಂಡರಿ ಮತ್ತು 10 ಸಿಕ್ಸರ್​ ಸಹ ಸೇರಿದ್ದು, 160.3 ರನ್​ ರೇಟ್​ ಹೊಂದಿದ್ದರು. ಟೀಂ ಇಂಡಿಯಾ ಪರ ದ್ವಿಶತಕ ಸಿಡಿಸಿದ ಕೆಲವೇ ಕೆಲವು ಆಟಗಾರರ ಸಾಲಿನಲ್ಲಿ ಇಶಾನ್​ ಸಹ ಸೇರಿದ್ದಾರೆ. ಸಚಿನ್​ ತೆಂಡೂಲ್ಕರ್​, ವೀರೇಂದ್ರ ಸೆಹ್ವಾಗ್​, ರೋಹಿತ್​ ಶರ್ಮ ಮತ್ತು ಶುಭಮನ್​ ಗಿಲ್​ ಸಾಲಿಗೆ ಇಶಾನ್​ ಸಹ ಸೇರಿದ್ದಾರೆ.

    Ishan Kishan 1

    ಉತ್ತಮ ಆರಂಭದ ಭರವಸೆ

    ಇಶಾನ್​ ಕಿಶಾನ್​ ಅವರ ಹಿಂದಿನ ಸಾಧನೆ ನೋಡಿದರೆ ಗಿಲ್​ ಅಲಭ್ಯರಾದರೆ ಇಶಾನ್​ ಅವರ ಸ್ಥಾನವನ್ನು ತುಂಬುವ ಭರವಸೆ ಇದೆ. ಆದರೆ, ಗಿಲ್​ ಅವರಷ್ಟು ಉತ್ತಮ ಫಾರ್ಮ್​ ಇಲ್ಲದಿದ್ದರೂ ಇಶಾನ್​ ಗಿಲ್​ ಕೊರತೆಯನ್ನು ನೀಗಿಸಲಿದ್ದಾರೆ ಎನ್ನಲಾಗುತ್ತಿದೆ. ಏಕೆಂದರೆ, ಸದ್ಯ ಇಶಾನ್​ ಭಾರತದ ತಂಡದ ಮಧ್ಯಮ ಕ್ರಮಾಂಕದ ಭರವಸೆ ಆಟಗಾರರಾಗಿದ್ದಾರೆ. ಏಷ್ಯಾ ಕಪ್​ ವೇಳೆ ಪಾಕಿಸ್ತಾನ ವಿರುದ್ಧದ ಮಹತ್ವದ ಪಂದ್ಯದಲ್ಲಿ 81 ಎಸೆತಕ್ಕೆ 82 ರನ್​ ಬಾರಿಸುವ ಮೂಲಕ ತಂಡಕ್ಕೆ ಆಸೆರೆಯಾದರು. ಹೀಗಾಗಿ ಇಶಾನ್​ ಮೇಲೆ ಆರಂಭಿಕ ಸ್ಥಾನದ ಜವಾಬ್ದಾರಿ ಬೀಳಲಿದೆ. (ಏಜೆನ್ಸೀಸ್​)

    ವಿಶ್ವಕಪ್​ ಮೊದಲ ಪಂದ್ಯಕ್ಕೂ ಮುನ್ನವೇ ಭಾರತಕ್ಕೆ ಶಾಕ್​: ಗಿಲ್​​ಗೆ​ ಡೆಂಘೆ, ಆಸಿಸ್​ ವಿರುದ್ಧ ಕಣಕ್ಕಿಳಿಯೋದು ಡೌಟು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts