

ನವದೆಹಲಿ: ಕೇವಲ 13 ಸಾವಿರ ರೂಪಾಯಿಗೆ ಖರೀದಿಸಿದ ಮಾಸ್ಕ್ ಒಂದನ್ನು ಬರೋಬ್ಬರಿ 36 ಕೋಟಿ ರೂಪಾಯಿಗೆ ಹರಾಜು ಹಾಕಿದ ಆರ್ಟ್ ಡೀಲರ್ ವಿರುದ್ಧ ಹಿರಿಯ ದಂಪತಿ ಕಾನೂನು ಕ್ರಮ ತೆಗೆದುಕೊಂಡಿದ್ದಾರೆ.
ಮೇಲ್ ಆನ್ಲೈನ್ ವರದಿಯ ಪ್ರಕಾರ ಮೋಸ ಹೋದ ದಂಪತಿ 80ರ ವಯಸ್ಸಿನವರು. ಇಬ್ಬರು ಫ್ರಾನ್ಸ್ನ ನಿಮ್ಸ್ ಮೂಲದವರು. 2021ರಲ್ಲಿ ತಮ್ಮ ಮನೆಯನ್ನು ತೆರವುಗೊಳಿಸುವಾಗ 'ಎನ್ಜಿಲ್' ಆಫ್ರಿಕನ್ ಮಾಸ್ಕ್ ಅನ್ನು ಮಾರಾಟ ಮಾಡಲು ನಿರ್ಧರಿಸಿದರು. ಮಿಸ್ಟರ್ ಝಡ್ ಎಂದು ಕರೆಯಲ್ಪಡುವ ಓರ್ವ ಆರ್ಟ್ ಡೀಲರ್ಗೆ 129 ಪೌಂಡ್ (13,208 ರೂಪಾಯಿ)ಗೆ ಮಾರಾಟ ಮಾಡಿದರು. ಆದರೆ, ಇದಾದ ಕೆಲವೇ ತಿಂಗಳುಗಳಲ್ಲಿ ಮಾಂಟ್ಪೆಲ್ಲಿಯರ್ನಲ್ಲಿ ನಡೆದ ಹರಾಜಿನಲ್ಲಿ ಅಪರೂಪದ ಮಾಸ್ಕ್ ಅನ್ನು 3.6 ಮಿಲಿಯನ್ ಪೌಂಡ್ಸ್ (36,86,17320 ರೂಪಾಯಿ)ಗೆ ಆರ್ಟ್ ಡೀಲರ್ ಮಾರಾಟ ಮಾಡಿದ್ದಾನೆ.
ಮಾಸ್ಕ್ ಇಷ್ಟು ದುಬಾರಿ ಬೆಲೆಗೆ ಮಾರಾಟವಾಗಿರುವ ಬಗ್ಗೆ ದಂಪತಿಗೆ ಆರಂಭದಲ್ಲಿ ಯಾವುದೇ ಅರಿವು ಇರಲಿಲ್ಲ. ಹೀಗೆ ಒಮ್ಮೆ ಪತ್ರಿಕೆ ಓದುವಾಗ ಮಾಸ್ಕ್ ಬಗ್ಗೆ ದಂಪತಿಗೆ ತಿಳಿದು ಒಂದು ಕ್ಷಣ ದಂಗಾದರು. ಇಷ್ಟೊಂದು ಬೆಲೆ ಬಾಳುತ್ತಾ ಎಂದು ಹುಬ್ಬೇರಿಸಿದರು. ಇದಾದ ಕೂಡಲೇ ಮಿ. ಝಡ್ ವಿರುದ್ಧ ದಂಪತಿ ಕೋರ್ಟ್ ಮೆಟ್ಟಿಲೇರಿದ್ದಾರೆ. ಮಾಸ್ಕ್ ನಿಜವಾದ ಮೌಲ್ಯವನ್ನು ಉದ್ದೇಶಪೂರ್ವಕವಾಗಿ ಮರೆಮಾಚಿ ನಮಗೆ ಮೋಸ ಮಾಡಿದ್ದಾರೆ ಎಂದು ದಂಪತಿ ದೂರಿನಲ್ಲಿ ಉಲ್ಲೇಖಸಿದ್ದಾರೆ.
ಮೆಟ್ರೋ ನ್ಯೂಸ್ ಪ್ರಕಾರ, ಈ ಮಾಸ್ಕ್ ಅನ್ನು ಮಧ್ಯ ಆಫ್ರಿಕಾದ ಗ್ಯಾಬನ್ ದೇಶದ ಫಾಂಗ್ ಜನರಿಂದ ಪಡೆಯಲಾಗಿದೆ. ಇದನ್ನು ಮದುವೆಗಳು ಮತ್ತು ಅಂತ್ಯಕ್ರಿಯೆ ಸಮಯದಲ್ಲಿ ಬಳಸಲಾಗುತ್ತಿತ್ತು. ಇದು ಆಫ್ರಿಕನ್ ದೇಶದ ಹೊರಗೆ ಕಾಣಸಿಗುವ ಅಪರೂಪದ ದೃಶ್ಯವಾಗಿದೆ. ಪ್ರಪಂಚದಾದ್ಯಂತ ಇರುವ ವಸ್ತುಸಂಗ್ರಹಾಲಯಗಳಲ್ಲಿ ಕೇವಲ ಬೆರಳೆಣಿಕೆಯಷ್ಟು ಮಾತ್ರ ಕಂಡುಬರುತ್ತವೆ. ಈ ಮಾಸ್ಕ್ 19ನೇ ಶತಮಾನಕ್ಕೆ ಸಂಬಂಧಿಸಿದ್ದಾಗಿದೆ ಎಂದು ಪರೀಕ್ಷೆಯ ವೇಳೆ ತಿಳಿದುಬಂದಿದೆ. ಈ ಮಾಸ್ಕ್'ಅಪರೂಪದ ದೃಷ್ಟಿಯಿಂದ ಅಸಾಧಾರಣ' ಎಂದು ನ್ಯಾಯಾಲಯದ ದಾಖಲೆಗಳು ವಿವರಿಸಿದೆ.
ಮಾಧ್ಯಮಗಳ ಪ್ರಕಾರ, ಗಂಡನ ಅಜ್ಜ ಆಫ್ರಿಕಾದಲ್ಲಿ ವಸಾಹತುಶಾಹಿ ಗವರ್ನರ್ ಆಗಿದ್ದರಿಂದ ದಂಪತಿ ಬಳಿಕ ಈ ಅಪರೂಪದ ಮುಖವಾಡ ಇತ್ತು. ಸದ್ಯ ಪ್ರಕರಣ ಕೋರ್ಟ್ನಲ್ಲಿ ನಡೆಯುತ್ತಿದೆ. ಆದರೆ ನಿಮ್ಸ್‌ನ ನ್ಯಾಯಾಲಯವು ದಂಪತಿಯ ಪ್ರಕರಣವನ್ನು 'ತಾತ್ವಿಕವಾಗಿ ಉತ್ತಮವಾಗಿ ಸ್ಥಾಪಿಸಲಾಗಿದೆ ಎಂದು ತೋರುತ್ತದೆ' ಎಂದು ತೀರ್ಪು ನೀಡಿದೆ. (ಏಜೆನ್ಸೀಸ್)