'ವರಾಹ ರೂಪಂ' ಹಾಡಿನ ವಿರುದ್ಧ ಥಾಯ್ಕುಡಂ ಬ್ರಿಡ್ಜ್​ ಕೇಸ್​ ಹಾಕಿದ್ದು ಯಾಕೆ? ತಂಡದ ಬೇಡಿಕೆ ಏನು?

Navarasam
Published on

ಕೋಜಿಕ್ಕೋಡ್​: 'ಕಾಂತಾರ' ಚಿತ್ರದ 'ವರಾಹ ರೂಪಂ' ಹಾಡಿನ ವಿರುದ್ಧ ಥಾಯ್ಕುಡಂ ಬ್ರಿಡ್ಜ್​ ಎಂಬ ಮ್ಯೂಸಿಕ್​ ಬ್ಯಾಂಡ್ ನ್ಯಾಯಾಲಯದ ಮೆಟ್ಟಿಲೇರಿದ್ದು, 'ವರಾಹ ರೂಪಂ' ಹಾಡನ್ನು ಅನುಮತಿ ಇಲ್ಲದೆ ಎಲ್ಲೂ ಬಳಸುವಂತಿಲ್ಲ ಎಂದು ಕೇರಳದ ಕೋರ್ಟ್​ ಆದೇಶ ನೀಡಿದ್ದು ಎಲ್ಲವೂ ಗೊತ್ತೇ ಇದೆ. ಆದರೆ, ಇಷ್ಟಕ್ಕೂ ಥಾಯ್ಕುಡಂ ಬ್ರಿಡ್ಜ್​ ನ್ಯಾಯಾಲಯದ ಮೊರೆ ಹೋಗಿದ್ದು ಏಕೆ? ಹಣದ ಉದ್ದೇಶದಿಂದಲಾ ಅಥವಾ ಬೇರೆ ಏನಾದರೂ ಉದ್ದೇಶದಿಂದಲಾ ಎಂಬ ಪ್ರಶ್ನೆ ಕೇಳಿ ಬರುತ್ತಿವೆ.

ಈ ಕುರಿತು ಇದೇ ಮೊದಲ ಬಾರಿಗೆ ಬ್ಯಾಂಡ್​ನ ಗಾಯಕ ವಿಯಾನ್​ ಫರ್ನಾಂಡಿಸ್​ ಮಾತನಾಡಿದ್ದು, ತಾವು ಕೋರ್ಟ್​ ಮೊರೆ ಹೋಗಿದ್ದು ಹಣ ಮಾಡುವ ಉದ್ದೇಶದಿಂದಲ್ಲ, ನ್ಯಾಯ ಪಡೆಯುವ ಉದ್ದೇಶದಿಂದ ಎಂದು ಸ್ಪಷ್ಟಪಡಿಸಿದ್ದಾರೆ.

ಈ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, 'ಇದೇ ಮೊದಲ ಬಾರಿಗೆ ಸ್ವತಂತ್ರ ಬ್ಯಾಂಡ್​ವೊಂದು ದೊಡ್ಡ ನಿರ್ಮಾಣ ಸಂಸ್ಥೆಯ ಜತೆಗೆ ಹೋರಾಟ ಮಾಡುತ್ತಿದೆ. ನಾವು ಈ ಹೋರಾಟ ಮಾಡುತ್ತಿರುವುದು ಹಣಕ್ಕಾಗಿ ಅಲ್ಲ, ಒಂದು ಉದಾಹರಣೆಯಾಗಲಿಕ್ಕೆ. ಈ ಕೇಸ್​ನಲ್ಲಿ ನಮಗೆ ನ್ಯಾಯ ಸಿಗುತ್ತದೋ ಇಲ್ಲವೋ ಗೊತ್ತಿಲ್ಲ. ಆದರೂ ಹೋರಾಡಿದೆವು ಎಂಬ ಸಂತೋಷ ಇದೆ' ಎನ್ನುತ್ತಾರೆ.

'ಆರಂಭದಲ್ಲಿ 'ವರಾಹ ರೂಪಂ' ಹಾಡನ್ನು 'ನವರಸಂ'ನಿಂದ ಕೃತಿಚೌರ್ಯ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಾಗ, ನಾವು ಅಷ್ಟು ತಲೆ ಕೆಡಿಸಿಕೊಳ್ಳಲಿಲ್ಲ. ಎರಡು ಹಾಡುಗಳ ಮಧ್ಯೆ ಸ್ವಾಮ್ಯತೆಗಳು ಇರುವುದು ಸಹಜ. ಕ್ರಮೇಣ ಆರೋಪಗಳು ಹೆಚ್ಚಾದವು. ಹಾಡು ಬಿಡುಗಡೆಗೂ ಮುನ್ನ ಒಬ್ಬ ನಮ್ಮನ್ನು ಸಂಪರ್ಕಿಸಿ, ನಮಗೆ ಕ್ರೆಡಿಟ್​ ಕೊಟ್ಟಿದ್ದರೂ ನಮಗೆ ಸಮಸ್ಯೆ ಇರುತ್ತಿರಲಿಲ್ಲ. ಆದರೆ, ಚಿತ್ರತಂಡದವರು ನಮ್ಮನ್ನು ಒಂದು ಮಾತು ಕೇಳುವ ಸೌಜನ್ಯವನ್ನೂ ತೋರಲಿಲ್ಲ. ಹಾಗಾಗಿಯೇ, ಈ ಕೃತಿಚೌರ್ಯದ ವಿರುದ್ಧ ನ್ಯಾಯಾಲಯದ ಮೊರೆ ಹೋಗಬೇಕಾಯಿತು' ಎಂದು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net