

ಬೆಂಗಳೂರು: 'ಲೂಸ್ ಮಾದ' ಯೋಗೇಶ್ ಅಭಿನಯದ 'ಲಂಕೆ' ಚಿತ್ರವು ಗಣಪತಿ ಹಬ್ಬದಂದು ಬಿಡುಗಡೆಯಾಗಿ ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆಯಂತೆ. ಇದನ್ನು ನೋಡಿ ಚಿತ್ರತಂಡದವರು ಸಹ ಫುಲ್ ಖುಷಿಯಾಗಿದ್ದಾರೆ. ಆ ಖುಷಿಯಲ್ಲಿ ಚಿತ್ರತಂಡದವರು ಹೇಳುವುದು ಏನು ಗೊತ್ತಾ?
ಮೊದಲ ವಾರ ಎಷ್ಟು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತೋ, ಎರಡನೇ ವಾರದಲ್ಲೂ ಅಷ್ಟೇ ಚಿತ್ರಮಂದಿರಗಳಲ್ಲಿ ಪ್ರದರ್ಶನವಾಗುತ್ತಿರುವುದೇ ಸಂತೋಷ ಎನ್ನುತ್ತಾರೆ ನಿರ್ದೇಶಕ ರಾಮ್ಪ್ರಸಾದ್. 'ಚಿತ್ರ ಸುಮಾರು ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಎರಡನೇ ವಾರದಲ್ಲೂ ಹೆಚ್ಚು ಕಡಿಮೆ ಅಷ್ಟೇ ಚಿತ್ರಮಂದಿರಗಳಲ್ಲಿ ನಮ್ಮ ಚಿತ್ರ ಮುಂದುವರೆಯುತ್ತಿದೆ. ಹಣ ಗಳಿಕೆಯೂ ಉತ್ತಮವಾಗಿದೆ. ಇದು ನನ್ನ ಮಾತಲ್ಲ ಪ್ರದರ್ಶಕ ಹಾಗೂ ವಿತರಕರ ಮಾತು' ಎನ್ನುತ್ತಾರೆ ಪ್ರಸಾದ್.
ಚಿತ್ರ ಬಿಡುಗಡೆಯಾದ ದಿನ ಯೋಗಿ ಚಿತ್ರಮಂದಿರಕ್ಕೆ ಹೋಗಿರಲಿಲ್ಲವಂತೆ. ಆ ನಂತರ ಹೋದಾಗ, ಪ್ರೇಕ್ಷಕರು ತೋರಿಸಿದ ಪ್ರೀತಿ ನೋಡಿ ಖುಷಿಯಾಯಿತಂತೆ. 'ಇಂತಹ ಸಂದರ್ಭದಲ್ಲಿ ನಮ್ಮ ಚಿತ್ರಕ್ಕೆ ಅಭಿಮಾನಿಗಳು ತೋರುತ್ತಿರುವ ಪ್ರೀತಿಕಂಡು ಸಂತಸವಾಗಿದೆ. ನನ್ನೊಡನೆ ನಟಿಸಿರುವ ಎಲ್ಲಾ ಕಲಾವಿದರ ಅಭಿನಯ ಅದ್ಭುತವಾಗಿದೆ' ಎನ್ನುತ್ತಾರೆ ಯೋಗಿ.
ಹಿರಿಯ ನಟ ಶರತ್ ಲೋಹಿತಾಶ್ವ ಮಾತನಾಡಿ, 'ಸಾಮಾನ್ಯವಾಗಿ ನಿರ್ದೇಶಕರು ನೀವು ಇಂತಹ ಪಾತ್ರ ಮಾಡಿ ಎಂದು ಹೇಳುತ್ತಾರೆ. ಆದರೆ, ಮೂರು ಪಾತ್ರಗಳ ಬಗ್ಗೆ ನನಗೆ ಹೇಳಿ ನಿಮಗೆ ಇಷ್ಟವಾದ ಪಾತ್ರ ಮಾಡಿ ಎಂದು ಹೇಳಿದ ಮೊದಲ ನಿರ್ದೇಶಕ ರಾಮ್ ಪ್ರಸಾದ್. ನಾನು ಉಳಿದ ಎರಡು ಪಾತ್ರಗಳನ್ನು ಹಲವು ಚಿತ್ರಗಳಲ್ಲಿ ಮಾಡಿದ್ದೆ. ಆದರೆ, ಮಂಗಳಮುಖಿ ಪಾತ್ರ ಮಾಡಿದ್ದು ಇದೇ ಮೊದಲು. ನನ್ನ ಈ ಪಾತ್ರಕ್ಕೆ ಜನ ಮೆಚ್ಚುಗೆ ವ್ಯಕ್ತವಾಗುತ್ತಿರುವುದಕ್ಕೆ ಸಂತಸವಾಗಿದೆ' ಎಂದರು ಹಿರಿಯ ನಟ ಶರತ್ ಲೋಹಿತಾಶ್ವ.
'ಲಂಕೆ' ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಪ್ರಶಾಂತ್ ಸಿದ್ದಿ ಮತತು ಡ್ಯಾನಿ ಕುಟ್ಟಪ್ಪ ಸಹ ಚಿತ್ರಕ್ಕೆ ಸಿಗುತ್ತಿರುವ ಪ್ರತಿಕ್ರಿಯೆಯ ಬಗ್ಗೆ ಖುಷಿಯಾಗಿದ್ದಾರೆ.