ಆರ್​ಆರ್​ಆರ್​: ಚಿತ್ರೀಕರಣಕ್ಕೆ ಬರಲ್ಲ ಎಂದ ರಾಮ್​ಚರಣ್​, ತಾರಕ್​

RRR - Final
Published on

ಎಸ್​.ಎಸ್​. ರಾಜಮೌಳಿ ನಿರ್ದೇಶನದ ಬಹುನಿರೀಕ್ಷಿತ ಚಿತ್ರ ಇನ್ನಷ್ಟು ಮುಂದಕ್ಕೆ ಹೋಗುವ ಸಾಧ್ಯತೆ ಇದೆ. ಇದಕ್ಕೂ ಮೊದಲು ಸಂಕ್ರಾಂತಿ ಸಮಯದಲ್ಲಿ ಚಿತ್ರವನ್ನು ಜಗತ್ತಿನಾದ್ಯಂತ ಬಿಡುಗಡೆ ಮಾಡುವುದಕ್ಕೆ ರಾಜಮೌಳಿ ಯೋಚಿಸಿದ್ದರು. ಆದರೆ, ಅದೀಗ ಇನ್ನಷ್ಟು ಮುಂದೆ ಮುಂದೆ ಹೋಗುವ ಸಾಧ್ಯತೆ ಇದೆ. ಕಾರಣ ಸದ್ಯ ಶೂಟಿಂಗ್​ನಲ್ಲಿ ಭಾಗವಹಿಸುವುದಕ್ಕೆ ರಾಮ್​ಚರಣ್​ ತೇಜ ಮತ್ತು ತಾರಕ್​ (ಜ್ಯೂನಿಯರ್​ ಎನ್​.ಟಿ.ಆರ್​) ಇಬ್ಬರೂ ನಿರಾಕರಿಸಿದ್ದಾರೆ.

ಚಿತ್ರೀಕರಣ ಚಟುವಟಿಕೆಗಳನ್ನು ಪ್ರಾರಂಭಿಸುವುದಕ್ಕೆ ತಲಂಗಾಣ ಸರ್ಕಾರ ಈಗಾಗಲೇ ಗ್ರೀನ್​ ಸಿಗ್ನಲ್​ ನೀಡಿದೆ. ಈ ಹಿನ್ನೆಲೆಯಲ್ಲಿ ಹೈದರಾಬಾದ್​ನ ರಾಮೋಜಿ ರಾವ್​ ಸ್ಟುಡಿಯೋದಲ್ಲಿ ಮುಂದಿನ ವಾರದಿಂದ ಚಿತ್ರೀಕರಣ ಶುರು ಮಾಡುವುದಕ್ಕೆ ರಾಜಮೌಳಿ ತಯಾರಿ ನಡೆಸುತ್ತಿದ್ದರು. ಹೀಗಿರುವಾಗಲೇ, ಎಲ್ಲೆಲ್ಲೂ ಕರೊನಾ ಕೇಸ್​ಗಳ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ, ರಾಮ್​ಚರಣ್​ ತೇಜ ಸ್ವತಃ ಫೋನ್​ ಮಾಡಿ, ಚಿತ್ರೀಕರಣ ಪೋಸ್ಟ್​ಪೋನ್​ ಮಾಡುವುದಕ್ಕೆ ಹೇಳಿದ್ದಾರಂತೆ.

ಈಗ ಚಿತ್ರೀಕರಣ ಮಾಡುವುದಕ್ಕೆ ಸಿಕ್ಕಾಪಟ್ಟೆ ರಿಸ್ಕಿಯಾಗಿರುವುದರಿಂದ, ಅಷ್ಟೊಂದು ರಿಸ್ಕ್​ ತೆಗೆದುಕೊಂಡು ಚಿತ್ರೀಕರಣ ಮಾಡುವ ಬದಲು, ಪೋಸ್ಟ್​ಪೋನ್​ ಮಾಡಿ ಎಂದು ಸಲಹೆ ನೀಡಿದರಂತೆ. ಜ್ಯೂನಿಯರ್​ ಎನ್​.ಟಿ.ಆರ್​ ಸಹ ಸದ್ಯದ ಪರಿಸ್ಥಿತಿಯಲ್ಲಿ ಚಿತ್ರೀಕರಣ ಬೇಡ, ಒಂದು ಪಕ್ಷ ಚಿತ್ರೀಕರಣ ಶುರುವಾದರೂ ತಾವು ಚಿತ್ರೀಕರಣದಲ್ಲಿ ಭಾಗವಹಿಸುವುದಿಲ್ಲ ಎಂದರಂತೆ.

ಚಿತ್ರದ ಇಬ್ಬರು ಪ್ರಮುಖ ನಟರೇ, ಇದೀಗ ಚಿತ್ರೀಕರಣವನ್ನು ಪೋಸ್ಟ್​ಪೋನ್​ ಮಾಡಿ ಎಂದು ಸಲಹೆ ನೀಡಿರುವುದರಿಂದ, ರಾಜಮೌಳಿ ಅವರಿಗೆ ಬೇರೆ ದಾರಿಯೇ ಇಲ್ಲದಂತಾಗಿದೆ. ಎಲ್ಲರ ಸುರಕ್ಷತೆಯ ದೃಷ್ಟಿಯಿಂದ ಅವರು ಸಹ ಚಿತ್ರೀಕರಣವನ್ನು ಮುಂದೂಡಿದ್ದು, ಕರೊನಾ ಕೇಸ್​ಗಳ ಸಂಖ್ಯೆ ಕಡಿಮೆಯಾಗುತ್ತಿದ್ದಂತೆಯೇ ಚಿತ್ರೀಕರಣ ಪ್ರಾರಂಭಿಸುವ ಸಾಧ್ಯತೆ ಇದೆ.

ಆರ್​ಆರ್​ಆರ್​ ಚಿತ್ರದಲ್ಲಿ ಇದೇ ಮೊದಲ ಬಾರಿಗೆ ತಾರಕ್​ ಮತ್ತು ರಾಮ್​ಚರಣ್​ ತೇಜ ಜತೆಯಾಗಿ ನಟಿಸುತ್ತಿದ್ದು, ಮಿಕ್ಕಂತೆ ಅಜಯ್​ ದೇವಗನ್​, ಶ್ರೇಯಾ ಶರಣ್​, ಆಲಿಯಾ ಭಟ್​ ಮುಂತಾದವರು ನಟಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net