

ಬೆಂಗಳೂರು: ನಟ ರವಿಶಂಕರ್ ಗೌಡ ವಾಸವಿರುವ ಅಪಾರ್ಟ್ಮೆಂಟ್ನಲ್ಲಿ ವ್ಯಕ್ತಿಯೊಬ್ಬರಿಗೆ ಕರೊನಾ ಸೋಂಕು ಪತ್ತೆಯಾಗಿದ್ದು, ಇಡೀ ಅಪಾರ್ಟ್ಮೆಂಟ್ ಸೀಲ್ಡೌನ್ ಆಗಿರುವುದರಿಂದ ಆತಂಕಕ್ಕೀಡಾಗಿರುವ ರವಿಶಂಕರ್ ಕುಟುಂಬಕ್ಕೆ ಸ್ಟಾರ್ ನಟರು ಧೈರ್ಯ ತುಂಬಿದ್ದಾರೆ.
ಹೊಸಕೆರೆಹಳ್ಳಿ ಸಮೀಪವಿರುವ ಪ್ರೆಸ್ಟೀಜ್ ಅಪಾರ್ಟ್ ಮೆಂಟ್ನಲ್ಲಿ ರವಿಶಂಕರ್ ಗೌಡ ಕುಟುಂಬ ವಾಸವಿದೆ. ಇದೇ ಅಪಾರ್ಟ್ಮೆಂಟ್ನಲ್ಲೇ ದರ್ಶನ್ ಪತ್ನಿ ವಿಜಯಲಕ್ಷ್ಮೀ ಸಹ ವಾಸವಿದ್ದಾರೆ. ರವಿಶಂಕರ್ ಎದುರು ಮನೆಯಲ್ಲೇ ಕರೊನಾ ಪತ್ತೆಯಾಗಿದೆ. ಸೋಂಕು ಪತ್ತೆಯಾಗಿರುವ ವ್ಯಕ್ತಿ ಉತ್ತರ ಭಾರತದ ವ್ಯಾಪಾರಿಯಾಗಿದ್ದು, ಆಗಾಗ ತಮಿಳುನಾಡಿನ ಸೇಲಂಗೆ ಹೋಗಿ ಬರುತ್ತಿದ್ದ ಎಂದು ತಿಳಿದುಬಂದಿದೆ.
ಅಪಾರ್ಟ್ಮೆಂಟ್ನಲ್ಲಿ ಒಟ್ಟು 12 ಮನೆಗಳಿದ್ದು, ಇಡೀ ಅಪಾರ್ಟ್ಮೆಂಟ್ ಸೀಲ್ಡೌನ್ ಮಾಡಲಾಗಿದೆ. ಅಪಾರ್ಟ್ಮೆಂಟ್ನಲ್ಲಿ ವಾಸವಿರುವ ಎಲ್ಲರಿಗೂ 14 ದಿನಗಳ ಕ್ವಾರಂಟೈನ್ನಲ್ಲಿ ಇರುವಂತೆ ಆರೋಗ್ಯ ಇಲಾಖೆ ಸೂಚಿಸಿದ್ದು, ವೈದ್ಯಕೀಯ ಸಿಬ್ಬಂದಿ ಪರಿಶೀಲನೆಗಾಗಿ ಆಗಾಗ ಅಪಾರ್ಟ್ಮೆಂಟ್ಗೆ ಭೇಟಿ ನೀಡುವ ಮೂಲಕ ಅಲ್ಲಿನ ನಿವಾಸಿಗಳಿಗೆ ಧೈರ್ಯ ತುಂಬುವ ಪ್ರಯತ್ನ ಮಾಡುತ್ತಿದ್ದಾರೆ.
ಸಹಾಯಾಸ್ತ ಚಾಚಿದ ಸ್ಟಾರ್ ನಟರು
ರವಿಶಂಕರ್ ಕುಟುಂಬದ ನೆರವಿಗೆ ಧಾವಿಸಿರುವ ನಟ ಕಿಚ್ಚ ಸುದೀಪ್, ಗಣೇಶ್ ಹಾಗೂ ಸೃಜನ್ ಮಕ್ಕಳನ್ನು ಮನೆಗೆ ಕರೆದುಕೊಂಡು ಬಾ ಎಂದು ಧೈರ್ಯ ತುಂಬಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ರವಿಶಂಕರ್ ನನ್ನ ಅಪಾರ್ಟ್ಮೆಂಟ್ನಲ್ಲಿ ನನ್ನ ಎದುರು ಮನೆಗೆ ಕರೊನಾ ವಕ್ಕರಿಸಿದೆ. ನನ್ನ ಮಕ್ಕಳಿರುವ ಮನೆಯನ್ನು ದೇವರೆ ಕಾಪಾಡಬೇಕು. 14 ದಿನ ಬಾಗಿಲನ್ನು ತೆರೆಯುವಂತಿಲ್ಲ. ಕ್ವಾರಂಟೈನ್ನಲ್ಲಿದ್ದೇವೆ. ಸುದೀಪ್, ಗಣಪ (ಗಣೇಶ್), ಸೃಜನ್, ಮಕ್ಕಳನ್ನು ನಮ್ಮ ಮನೆಗೆ ಕರೆದುಕೊಂಡು ಬಾ ಅಂದರು. ಇದು ಗೆಳೆತನ ಅಂದ್ರೆ. ವಿಚಾರಿಸಿದ ಸಂತೋಷ್ ಆನಂದ್, ರಘುರಾಮ್ ಅವರಿಗು ಧನ್ಯವಾದಗಳು ಎಂದು ಹೇಳಿದ್ದಾರೆ.