

ಮುಂಬೈ: ಗೋವಾದಲ್ಲಿ ಹೊಸ ವರ್ಷದ ಪಾರ್ಟಿಯೊಂದರಲ್ಲಿ ಜೋಡಿಯೊಂದು ಅಪ್ಪಿ, ಮುದ್ದಾಡುತ್ತಿರುವ ವಿಡಿಯೋ ವೈರಲ್ ಆಗಿದ್ದು, ಆ ಪ್ರಣಯ ಪಗಳು ಬೇರಾರೂ ಅಲ್ಲ, ತಮನ್ನಾ ಮತ್ತು ವಿಜಯ್ ವರ್ಮಾ ಎಂದು ಹೇಳಲಾಗಿತ್ತು. ಆಗಲೇ ಅವರಿಬ್ಬರೂ ಡೇಟಿಂಗ್ ಮಾಡುತ್ತಿರುವ ಗುಮಾನಿ ಹಲವರಿಗೆ ಬಂದಿತ್ತು. ಈ ಕುರಿತು ಸಾಕಷ್ಟು ಸುದ್ದಿಯೂ ಆಗಿತ್ತು. ಆದರೆ, ಈ ಕುರಿತು ತಮನ್ನಾ ಭಾಟಿಯಾ ಆಗಲೀ, ವಿಜಯ್ ಆಗಲೀ ಏನೂ ಮಾತಾಡಿರಲಿಲ್ಲ.
ಈಗ ತಮನ್ನಾ ಮತ್ತು ವಿಜಯ್ ಮೊದಲ ಬಾರಿಗೆ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಮುಂಬೈನಲ್ಲಿ ನಡೆದ ಸಮಾರಂಭವೊಂದರಲ್ಲಿ ಒಟ್ಟಿಗೆ ಕೈಕೈ ಹಿಡಿದು ಬಂದು, ತಮ್ಮ ಬಗ್ಗೆ ಕೇಳಿ ಬರುತ್ತಿರುವ ಸುದ್ದಿಗಳು ಬರೀ ಊಹಾಪೋಹಗಳಷ್ಟೇ ಅಲ್ಲ, ನಿಜವಾಗುವ ಸಾಧ್ಯತೆ ಇದೆ ಎಂದು ಹಿಂಟ್ ಕೊಟ್ಟಿದ್ದಾರೆ.
ಕೆಲವು ದಿನಗಳ ಹಿಂದಷ್ಟೇ ನಟ ತಮನ್ನಾ ಮುಂಬೈ ಮೂಲದ ಉದ್ಯಮಿ ಜತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಹರಡಿತ್ತು. ಅದಕ್ಕೆ ಖುದ್ದು ತಮನ್ನಾ, ತಾವೇ ಹುಡುಗನ ವೇಷ ಧರಿಸಿ ಇವರೇ ನನ್ನ ಬಾಯ್ಫ್ರೆಂಡ್ ಎಂದು ಸ್ಪಷ್ಟನೆ ನೀಡಿದ್ದರು. ಆ ನಂತರ ಹೊಸ ವರ್ಷದ ಸಂಭ್ರಮಾಚರಣೆಯ ಸಂದರ್ಭದಲ್ಲಿ ತಮನ್ನಾ ಮತ್ತು ವಿಜಯ್ ವರ್ಮಾ ಒಟ್ಟಿಗೆ ಸಿಕ್ಕಿಬಿದ್ದಿದ್ದರು. ಈಗ ಅವರಿಬ್ಬರೂ ಜತೆಯಾಗಿ ಓಡಾಡುತ್ತಿರುವುದು, ಅವರಿಬ್ಬರೂ ಪ್ರೇಮಿಗಳು ಎಂಬ ವಿಷಯಕ್ಕೆ ಇನ್ನಷ್ಟು ಪುಷ್ಠಿ ನೀಡುತ್ತದೆ.
ಹಾಗಾದರೆ, ತಮನ್ನಾ ಮತ್ತು ವಿಜಯ್ ತಮ್ಮ ಪ್ರೀತಿಯ ವಿಷಯವನ್ನು ಯಾವಾಗ ಬಹಿರಂಗಪಡಿಸುತ್ತಾರೆ ಮತ್ತು ಯಾವಾಗ ಮದುವೆಯಾಗುವುದಾಗಿ ಅಧಿಕೃತವಾಗಿ ಘೋಷಿಸುತ್ತಾರೆ ಎಂಬ ಕುತೂಹಲ ಎಲ್ಲರಲ್ಲೂ ಇದೆ. ಆ ಸಮಯ ಯಾವಾಗ ಬರುತ್ತದೋ ನೋಡಬೇಕು.