

ಮುಂಬೈ: ಬಾಲಿವುಡ್ನ ಹಿರಿಯ ನಟಿ ಮತ್ತು 'ಬಿಗ್ ಬಿ' ಅಮಿತಾಭ್ ಬಚ್ಚನ್ ಅವರ ಪತ್ನಿ ಜಯಾ ಬಚ್ಚನ್ ಅವರ ಮೂಗಿನ ತುದಿಯಲ್ಲೇ ಕೋಪ ಇರುತ್ತದೆ. ಯಾರಾದರೂ ತರಲೆ ಮಾಡಿದರೆ, ಅಸಭ್ಯವಾಗಿ ವರ್ತಿಸಿದರೆ ಅವರು ಸಿಟ್ಟು ಸ್ಪೋಟಗೊಳ್ಳುತ್ತದೆ. ಅದರಲ್ಲೂ ಪಾಪರಾಜಿಗಳನ್ನು ಕಂಡರೆ ಜಯಾ ಬಚ್ಚನ್ ಅವರಿಗೆ ಎಲ್ಲಿಲ್ಲದ ಸಿಟ್ಟು.
ಇದನ್ನೂ ಓದಿ: ಮದುವೆಯಾದವರ ಅನುಭವವೇ ‘ಲವ್ ಬರ್ಡ್ಸ್’; ಟೀಸರ್ ಬಿಡುಗಡೆ
ತಮ್ಮ ಅನುಮತಿ ಇಲ್ಲದೆ ಪಾಪರಾಜಿಗಳು ಫೋಟೋ ತೆಗೆದರೆ ಅಥವಾ ವೀಡಿಯೋಗಳನ್ನು ಮಾಡಿದರೆ, ಅವರಿಗೆ ಅಲ್ಲೇ ಕ್ಲಾಸ್ ತೆಗೆದುಕೊಂಡ ಉದಾಹರಣೆಗಳು ಹಲವಿವೆ. ಈಗ ಆ ಸಾಲಿಗೆ ಇನ್ನೊಂದು ಸೇರ್ಪಡೆಯಾಗಿದೆ.
ಇತ್ತೀಚೆಗೆ, ಅಮಿತಾಭ್ ಬಚ್ಚನ್ ಮತ್ತು ಜಯಾ ಬಚ್ಚನ್ ಯಾವುದೋ ಕಾರ್ಯಕ್ರಮಕ್ಕೆ ಇಂದೋರ್ಗೆ ಹೋಗಿದ್ದಾರೆ. ಈ ಸಂದರ್ಭದಲ್ಲಿ ಜಯಾ ಬಚ್ಚನ್ ಅವರನ್ನು ಏರ್ಪೋರ್ಟ್ನಲ್ಲಿ ಯಾರೋ ಮಾತಾಡಿಸಿದ್ದಾರೆ. ಪಾಪರಾಜಿಗಳು ಅದೆಲ್ಲಿದ್ದರೋ ಗೊತ್ತಿಲ್ಲ. ಬಂದು ಜಯಾ ಬಚ್ಚನ್ ಅವರ ಫೋಟೋಗಳನ್ನು ತೆಗೆಯಲು ಪ್ರಾರಂಭಿಸಿದ್ದಾರೆ. ಸಿಟ್ಟಿಗೆದ್ದ ಜಯಾ ಬಚ್ಚನ್, ಫೋಟೊ ತೆಗೆಯುವುದನ್ನು ನಿಲ್ಲಿಸುವುದಕ್ಕೆ ಹೇಳಿದ್ದಾರೆ.
ಈ ಬಗ್ಗೆ ಬೇಸರ ವ್ಯಕ್ತಪಡಿಸಿದ ಜಯಾ ಬಚ್ಚನ್, 'ನನ್ನ ಫೋಟೋಗಳನ್ನು ತೆಗೆಯಬೇಡಿ. ನಿಮಗೆ ಹೇಳಿದರೆ ಅರ್ಥವಾಗುವುದಿಲ್ಲವಾ? ನಿಮ್ಮಂಥವರನ್ನು ಕೆಲಸದಿಂದು ಕಿತ್ತು ಹಾಕಬೇಕು' ಎಂದು ಹೇಳಿದ್ದಾರೆ. ಅಷ್ಟರಲ್ಲಿ ಅವರ ಬಾಡಿಗಾರ್ಡ್ಗಳು ಬಂದು ಪಾಪರಾಜಿಗಳನ್ನು ತಡೆದಿದ್ದಾರೆ. ಜಯಾ ಅವರ ಸ್ವಲ್ಪ ಹಿಂದೆ ಹಿಂದೆ ಅಮಿತಾಭ್ ಬಚ್ಚನ್, ತಮ್ಮ ಪತ್ನಿಯ ಸಿಟ್ಟು ನೋಡಿ ಗಾಬರಿಯಾಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.