

ಬೆಂಗಳೂರು: ಈ ಹಿಂದೆ 'ಡೇಂಜರ್ ಜೋನ್', 'ನಿಶ್ಯಬ್ದ ೨' ಹಾಗೂ 'ಅನುಷ್ಕಾ' ಚಿತ್ರಗಳನ್ನು ನಿರ್ದೇಶಿಸಿದ್ದ ದೇವರಾಜ್ ಕುಮಾರ್, ಇನ್ನೊಂದು ಚಿತ್ರ ಮಾಡಿ ಮುಗಿಸಿದ್ದಾರೆ. ಅದೇ 'ತಾಜ್ ಮಹಲ್ 2'. ಈ ಬಾರಿ ತಾವೇ ಕಥೆ, ಚಿತ್ರಕಥೆ ಬರೆದು, ನಿರ್ದೇಶನ ಮಾಡಿ, ಅದರಲ್ಲಿ ಹೀರೋ ಆಗಿಯೂ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಚಿತ್ರೀಕರಣ ಇದೀಗ ಮುಗಿದಿದ್ದು, ಸದ್ಯದಲ್ಲೇ ಟ್ರೇಲರ್ ಬಿಡುಗಡೆಯಾಗಲಿದೆ.
ಇದನ್ನೂ ಓದಿ: ನಟಿ ಕಂಗನಾ ರಣಾವತ್ ಅರ್ಜಿ ತಿರಸ್ಕರಿಸಿದ ಹೈಕೋರ್ಟ್
'ತಾಜ್ ಮಹಲ್ 2' ಎಂಬ ಹೆಸರು ಕೇಳಿದರೆ, ಇದು ಮರ್ಡರ್ ಮಿಸ್ಟರಿ ಇರಲಾರದು, ಬಹುಶಃ ಲವ್ಸ್ಟೋರಿಯೇ ಇರಬೇಕು ಎಂದು ನಿಮಗನಿಸಿದ್ದಲ್ಲಿ, ನೀವು ಸೆಂಟ್ ಪರ್ಸೆಂಟ್ ನಿಜ. ಹೆಸರೇ ಹೇಳುವಂತೆ ಇದೊಂದು ಪ್ರೇಮಕಥೆ ಇರುವ ಚಿತ್ರ. ಆದರೆ, ಆರ್. ಚಂದ್ರ ನಿರ್ದೇಶನದ 'ತಾಜ್ ಮಹಲ್'ಗೂ, ಈ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ. ಹಾಗೆಯೇ, ಇದು ಅದರ ಮುಂದುವರೆದ ಭಾಗವೂ ಅಲ್ಲ.
ಇದೊಂದು ವಿಭಿನ್ನ ಕಥಾಹಂದರದ ಚಿತ್ರ ಎಂದು ಚಿತ್ರತಂಡ ಹೇಳಿಕೊಂಡಿದ್ದು, ಈ ಚಿತ್ರಕ್ಕೆ ಬೆಂಗಳೂರು, ಸಕಲೇಶಪುರ, ಗಗನಚುಕ್ಕಿ, ಬರಚುಕ್ಕಿ ಮುಂತಾದ ಕಡೆ 65 ದಿನಗಳ ಚಿತ್ರೀಕರಣ ನಡೆದಿದೆ. ದೇವರಾಜ್ ಕುಮಾರ್ ಅವರಿಗೆ ನಾಯಕಿಯಾಗಿ ಸಮೃದ್ಧಿ ಶುಕ್ಲ ಅಭಿನಯಿಸಿದ್ದಾರೆ.
'ತಾಜ್ ಮಹಲ್ 2' ಚಿತ್ರಕ್ಕೆ ಮನವರ್ಷಿ ನವಲಗುಂದ ಹಾಡುಗಳನ್ನು ಬರೆದಿದ್ದು, ವಿಕ್ರಂ ಸೆಲ್ವ ಸಂಗೀತ ಸಂಯೋಜಿಸಿದ್ದಾರೆ. ಇನ್ನು, ವೀನಸ್ ಮೂರ್ತಿ ಅವರ ಛಾಯಾಗ್ರಹಣವಿದೆ.