

ಭಾನುವಾರವಷ್ಟೇ ನಿಧನರಾದ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮುಂದಿನ ಚಿತ್ರಗಳ ಕಥೆಯೇನು? ಈ ಪ್ರಶ್ನೆ ಸಹಜವಾಗಿಯೇ ಎಲ್ಲರನ್ನೂ ಕಾಡುವುದು ಸಹಜ. ಏಕೆಂದರೆ, ಸುಶಾಂತ್ ಅವರಿಗೆ ಬಾಲಿವುಡ್‌ನಲ್ಲಿ ಬಹಳ ಬೇಡಿಕೆ ಇತ್ತು. ಹಾಗಾಗಿ ಅವರು ಎಷ್ಟು ಚಿತ್ರಗಳಲ್ಲಿ ನಟಿಸುತ್ತಿರಬಹುದು, ಆ ಚಿತ್ರಗಳ ಮುಂದಿನ ಗತಿಯೇನು ಎಂಬಂತಹ ಪ್ರಶ್ನೆಗಳು ಸಹಜ.
ಆದರೆ, ಒಂದು ವಿಷಯ ಗೊತ್ತಾ? ಕಳೆದ ವರ್ಷ ಬಿಡುಗಡೆಯಾದ ‘ಚಿಚ್ಚೋರೇ’ ಮತ್ತು ‘ಸೊಂಚಿರಿಯಾ’ ಚಿತ್ರಗಳ ನಂತರ ಸುಶಾಂತ್ ಯಾವೊಂದು ಚಿತ್ರಗಳ ಚಿತ್ರೀಕರಣ ಸಹ ಆಗುತ್ತಿರಲಿಲ್ಲ. ಒಂದಿಷ್ಟು ಚಿತ್ರಗಳು ಮಾತುಕಥೆಯಾಗಿತ್ತಾದರೂ, ಲಾಕ್‌ಡೌನ್‌ನಿಂದಾಗಿ ಆ ಚಿತ್ರಗಳು ಸೆಟ್ಟೇರಿರಲಿಲ್ಲ. ಹಾಗಾಗಿ ಎರಡು ವರ್ಷಗಳ ಹಿಂದೆ ಪ್ರಾರಂಭವಾಗಿ, ಇನ್ನೂ ಬಿಡುಗಡೆಯಾಗಬೇಕಿರುವ ‘ದಿಲ್ ಬೇಚಾರಾ’ ಚಿತ್ರವೇ ಅವರ ಕೊನೆಯ ಚಿತ್ರವಾಗಲಿದೆ.
ಹೌದು, ಸುಶಾಂತ್ ಸಿಂಗ್ ರಜಪೂತ್ ಅವರ ಕೊನೆಯ ಚಿತ್ರವಾಗಿ ‘ದಿಲ್ ಬೇಚಾರಾ’ ಬಿಡುಗಡೆಯಾಗಲಿದೆ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಕಳೆದ ತಿಂಗಳೇ ಚಿತ್ರ ಬಿಡುಗಡೆಯಾಗಬೇಕಿತ್ತು. ಆದರೆ, ಲಾಕ್‌ಡೌನ್‌ನಿಂದಾಗಿ ಚಿತ್ರದ ಮುಂದಕ್ಕೆ ಹೋಗಿದ್ದು, ಚಿತ್ರ ಪ್ರದರ್ಶನ ಶುರುವಾದ ನಂತರ, ಚಿತ್ರ ಬಿಡುಗಡೆಯಾಗಲಿದೆ.
‘ದಿಲ್ ಬೇಚಾರಾ’ ಚಿತ್ರ ಎರಡು ವರ್ಷಗಳ ಹಿಂದೆಯೇ ಪ್ರಾರಂಭವಾದರೂ, ಹಲವು ವಿಘ್ನಗಳನ್ನು ಎದುರಿಸಿ, ಇದೀಗ ಬಿಡುಗಡೆಗೆ ಸಜ್ಜಾಗುತ್ತಿದೆ. 2018ರ ಜುಲೈನಲ್ಲಿ ಜಮಶೆಡ್‌ಪುರದಲ್ಲಿ ಈ ಚಿತ್ರದ ಮುಹೂರ್ತವಾಗಿತ್ತು. ಸುಶಾಂತ್ ಮತ್ತು ಹೊಸ ಹುಡುಗಿ ಸಂಜನಾ ಸಾಂ ಅಭಿನಯದ ಈ ಚಿತ್ರಕ್ಕೆ ಮುಕೇಶ್ ಛಾಬ್ರಾ ನಿರ್ದೇಶಕರು. ‘ದಿ ಫಾಲ್ಟ್ ಇನ್ ಅವರ್ ಸ್ಟಾರ್ಸ್’ ಎಂಬ ಇಂಗ್ಲೀಷ್ ಕಾದಂಬರಿ ಆಧರಿಸಿ ಈ ಚಿತ್ರ ಶುರುವಾಗಿತ್ತು. ಆರಂಭದಲ್ಲಿ ಈ ಚಿತ್ರಕ್ಕಿದ್ದ ಹೆಸರು ‘ಕಿಝ್ಝಿ ಔರ್ ಮ್ಯಾನಿ’.
ಇದನ್ನೂ ಓದಿ: ಸುಶಾಂತ್ ಕೇಸ್ ಸಿಬಿಐಗೆ ಒಪ್ಪಿಸಲು ಆಗ್ರಹ
ಚಿತ್ರದ ಚಿತ್ರೀಕರಣವೇನೋ ಬೇಗ ಆರಂಭವಾಗಿ ಬೇಗ ಮುಗಿಯಿತು. ಆದರೆ, ಅಷ್ಟರಲ್ಲಿ ಮೀಟೂ ಪ್ರಕರಣದಲ್ಲಿ ನಿರ್ದೇಶಕರ ಮುಕೇಶ್ ಛಾಬ್ರಾ ಹೆಸರು ಕೇಳಿ ಬಂದಿದ್ದರಿಂದ, ಕೆಲಸ ಅರ್ಧಕ್ಕೆ ನಿಂತಿತ್ತು. ಕೊನೆಗೆ ಮುಕೇಶ್ ನಿರಪರಾಧಿ ಎಂದು ಸಾಬೀತಾದ ನಂತರ, ಅವರನ್ನು ನಿರ್ಮಾಪಕರಾದ ಫಾಕ್ಸ್ ಸ್ಟಾರ್ ಸ್ಟುಡಿಯೋಸ್‌ನವರು ಪುನಃ ಕೆಲಸವನ್ನು ಮುಂದುವರೆಸುವುದಕ್ಕೆ ಹೇಳಿದರು. ಕೆಲಸವೆಲ್ಲಾ ಮುಗಿದು, ಚಿತ್ರಕ್ಕೆ ‘ದಿಲ್ ಬೇಚಾರಾ’ ಎಂದು ಹೆಸರಿಡಲಾಯಿತು.
‘ದಿಲ್ ಬೇಚಾರಾ’ ಸಂಪೂರ್ಣವಾದ ಮೇಲೆ ಕಳೆದ ನವೆಂಬರ್‌ನಲ್ಲಿ ಚಿತ್ರದ ಬಿಡುಗಡೆ ಎಂದು ಮೊದಲು ಹೇಳಲಾಗಿತ್ತು. ಕಾರಣಾಂತರಗಳಿಂದ, ಚಿತ್ರದ ಬಿಡುಗಡೆ ಮುಂದಕ್ಕೆ ಹೋಗಿ ಮೇ 08ರಂದು ನಿಗದಿಯಾಗಿತ್ತು. ಆಗ ಲಾಕ್‌ಡೌನ್ ಇದ್ದಿದುರಿಂದ, ಚಿತ್ರ ಮುಂದಕ್ಕೆ ಹೋಗಿದೆ.
ಈ ಚಿತ್ರ ಬಿಡುಗಡೆಯಾಗುವುದಕ್ಕೆ ಮುಂಚೆಯೇ ಸುಶಾಂತ್ ಇನ್ನಿಲ್ಲವಾಗಿರುವುದು ದುರಂತ.