

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಭಾನುವಾರ ಆತ್ಮಹತ್ಯೆಗೆ ಶರಣಾದ ಬೆನ್ನಲ್ಲೇ, ಆಲಿಯಾ ಭಟ್ ಮತ್ತು ಕರಣ್ ಜೋಹರ್ ವಿರುದ್ಧ ನೆಟ್ಟಿಗರು ಗರಂ ಆಗಿದ್ದಾರೆ. ಅಷ್ಟೇ ಅಲ್ಲ, ಬಹಿರಂಗವಾಗಿ ಅವರನ್ನು ತರಾಟೆಗೆ ತೆಗೆದುಕೊಂಡು, ಬಿಸಿ ಮುಟ್ಟಿಸಿದ್ದಾರೆ. ಹಾಗಾದರೆ ಅಷ್ಟಕ್ಕೂ ಆಲಿಯಾ ಮತ್ತು ಕರಣ್ ಮೇಲೆ ನೆಟ್ಟಿಗರು ಗರಂ ಆಗಲು ಕಾರಣವಾದರೂ ಏನು?
ಹೌದು, 2014ರಲ್ಲಿ ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಆಲಿಯಾ ಭಟ್, ವರುಣ್ ಧವನ್, ಸಿದ್ಧಾರ್ಥ್ ಮಲ್ಹೋತ್ರಾ ಪಾಲ್ಗೊಂಡಿದ್ದರು. ಎಂದಿನಂತೆ ಕರಣ್ ಜೋಹರ್ ನಿರೂಪಕರಾಗಿದ್ದರು. ಹೀಗಿರುವಾಗಲೇ ರ್ಯಾಪಿಡ್ ಫೈಯರ್ ರೌಂಡ್ ಪ್ರಶ್ನೆಗಳನ್ನು ಆಲಿಯಾಗೆ ಕರಣ್ ಕೇಳುತ್ತ ಹೋದರು. ನೀವು ಮದುವೆಯಾಗುವುದಾದರೆ, ಡೇಟ್ ಮಾಡುವುದಾದರೆ ಮತ್ತು ಕೊಲೆ ಮಾಡುವುದಾದರೆ ಈ ಮೂವರಲ್ಲಿ ಯಾರನ್ನು ಮಾಡುತ್ತೀರಿ. ಆಪ್ಷನ್ಸ್; ರಣವೀರ್ ಸಿಂಗ್, ರಣಬೀರ್ ಕಪೂರ್, ಸುಶಾಂತ್ ಸಿಂಗ್ ರಜಪೂತ್.. ಅದಕ್ಕೆ ಉತ್ತರಿಸಿದ ಆಲಿಯಾ, ರಣಬೀರ್ನನ್ನು ಮದುವೆಯಾಗುವುದಾಗಿ, ರಣವೀರ್ ಜತೆ ಡೇಟ್ ಮತ್ತು ಸುಶಾಂತ್ ಸಿಂಗ್ನನ್ನು ಕೊಲ್ಲುದಾಗಿ ಉತ್ತರ ನೀಡಿದ್ದರು.
ಅದಾದ ಬಳಿಕ ಇನ್ನೊಂದು ಪ್ರಶ್ನೆಯನ್ನು ಎಸೆದಿದ್ದರು ಕರಣ್, ಈ ಮೂವರಲ್ಲಿ ಯಾರು ಸೆಕ್ಸಿ ಮತ್ತು ಹಾಟ್ ಆಗಿದ್ದಾರೆ ಹೇಳಿ ಎಂದು ಆಲಿಯಾಗೆ ಕೇಳಿದರು. ರಣವೀರ್ ಸಿಂಗ್, ಸುಶಾಂತ್ ಸಿಂಗ್ ಮತ್ತು ವರುಣ್ ಧವನ್.. ಈ ಮೂವರ ಹೆಸರುಗಳನ್ನು ಹೇಳುತ್ತಿದ್ದಂತೆ, ಸುಶಾಂತ್ ಸಿಂಗ್ ರಜಪೂತ್ ಯಾರು? ಎಂದು ಉತ್ತರಿಸಿದ್ದರು ಆಲಿಯಾ. ಆರು ವರ್ಷದ ಹಿಂದಿನ ವಿಡಿಯೋ ತುಣುಕೀಗ ಎಲ್ಲೆಡೆ ವೈರಲ್ ಆಗಿದ್ದು, ಆಲಿಯಾ ಮತ್ತು ಕರಣ್ ವಿರುದ್ಧ ನೆಟ್ಟಿಗರು ಗರಂ ಆಗಿದ್ದಾರೆ. ರಿಯಾಲಿಟಿ ಶೋದಲ್ಲಿ ಇಂಥ ಪ್ರಶ್ನೆಗಳ ಅವಶ್ಯಕತೆ ಇದೆಯಾ ಎಂದು ಅವರ ಕಾಲೆಳೆದಿದ್ದಾರೆ.
ಆಲಿಯಾ ಭಟ್ ಸಹ ಆಗ ತಾನೇ ಮೊದಲ ಸಿನಿಮಾ ಖುಷಿಯಲ್ಲಿದ್ದರು. ಅಷ್ಟೊತ್ತಿಗಾಗಲೇ ಕಿರುತೆರೆಯಲ್ಲಿ ಸುಶಾಂತ್ ಹೆಸರು ಮಾಡಿದ್ದರು. ಸಿನಿಮಾ ಅವಕಾಶಗಳೂ ಅವರನ್ನು ಹುಡುಕಿಕೊಂಡು ಬಂದಿದ್ದವು. ಕೈ ಪೋ ಚೇ ಚಿತ್ರದಲ್ಲಿ ನಟಿಸಿ ಮೆಚ್ಚುಗೆಯನ್ನೂ ಗಿಟ್ಟಿಸಿಕೊಂಡಿದ್ದರು. ಹೀಗಿರುವಾಗ ಪ್ರತಿಭಾನ್ವಿತ ನಟನ ಬಗ್ಗೆ ಹೀಗೆ ಮಾತನಾಡಿರುವ ಆಲಿಯಾ ವಿರುದ್ಧ ಸಿಡಿಮಿಡಿಗೊಂಡಿದ್ದಾರೆ. (ಏಜೆನ್ಸೀಸ್)