ಸುಶಾಂತ್ ಕೇಸ್ ಸಿಬಿಐಗೆ ಒಪ್ಪಿಸಲು ಆಗ್ರಹ

Sushanth Singh - CBI - Final
Published on

ಭಾನುವಾರ ನೇಣು ಬಿಗಿದುಕೊಂಡು ನಿಧನರಾದ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಪ್ರಕರಣವನ್ನು ಸೆಂಟ್ರಲ್ ಬ್ಯೂರೋ ಆ್ ಇನ್‌ವೆಸ್ಟಿಗೇಷನ್ (ಸಿಬಿಐ)ಗೆ ಒಪ್ಪಿಸುವುದಕ್ಕೆ ಜನ್ ಅಧಿಕಾರ್ ಪಾರ್ಟಿ ಅಧ್ಯಕ್ಷ ಪಪ್ಪು ಯಾದವ್ ಆಗ್ರಹಿಸಿದ್ದಾರೆ.

ಈ ಕುರಿತು ಮಾತನಾಡಿರುವ ಅವರು. ‘ಸುಶಾಂತ್ ಇಲ್ಲ ಎನ್ನುವುದನ್ನು ಊಹಿಸಲೂ ಸಾಧ್ಯವಾಗುತ್ತಿಲ್ಲ. ಅವರ ಸಾವಿನ ಹಿಂದೆ ದೊಡ್ಡ ಷಡ್ಯಂತ್ರ ಇರುವಂತೆ ಕಾಣಿಸುತ್ತಿದೆ. ಸುಶಾಂತ್ ಆತ್ಮಹತ್ಯ ಮಾಡಿಕೊಳ್ಳುವಂತಹ ವ್ಯಕ್ತಿಯಲ್ಲ’ ಎಂದು ಪಪ್ಪು ಯಾದವ್ ಹೇಳಿದ್ದಾರೆ.

ಈ ಪ್ರಕರಣವನ್ನು ಸಿಬಿಐಗೆ ಒಪ್ಪಿಸುವಂತೆ ಆಗ್ರಹಿಸಿರುವ ಅವರು. ‘ಈ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು. ಸುಶಾಂತ್ ಒಬ್ಬ ಒಳ್ಳೆಯ ಮನುಷ್ಯ ಅಷ್ಟೇ ಅಲ್ಲ, ತಳಮಟ್ಟದಿಂದ ಬಹಳ ಕಷ್ಟಪಟ್ಟು ಮೇಲೆ ಬಂದವರು. ಬಿಹಾರ ರಾಜ್ಯಕ್ಕೆ ಘನತೆ ತಂದುಕೊಟ್ಟವರು. ಇಡೀ ರಾಜ್ಯ ಅವರ ನಿಧನದ ವಾರ್ತೆ ಕೇಳಿ ದಂಗಾಗಿದೆ’ ಎಂದು ಪಪ್ಪು ಯಾದವ್ ಹೇಳಿದ್ದಾರೆ.

ಮೂಲತಃ ಪಾಟ್ನಾದವರಾದ ಸುಶಾಂತ್ ಸಿಂಗ್ ರಜಪೂತ್, ದೆಹಲಿಯಲ್ಲಿ ಇಂಜಿನಿಯರಿಂಗ್‌ವರೆಗೂ ಓದಿದವರು. ನಂತರ ಕಾಲೇಜಿನಿಂದ ಹೊರನಡೆದ ಅವರು, ಚಿತ್ರನಟನಾಗಬೇಕು ಎಂಬ ಕನಸು ಹೊತ್ತು ಬ್ಯಾರಿ ಜಾನ್ ಆ್ಯಕ್ಟಿಂಗ್ ಸ್ಕೂಲ್‌ನಲ್ಲಿ ತರಬೇತಿ ಪಡೆದರು. ಅದಾದ ಮರುವರ್ಷವೇ ಅವರು ಹಿಂದಿ ಧಾರಾವಾಹಿಯಲ್ಲಿ ಕಾಣಿಸಿಕೊಂಡರು. ‘ಪವಿತ್ರ ರಿಷ್ತಾ’ ಎಂಬ ಧಾರಾವಾಹಿ ಅವರಿಗೆ ಅಪಾರ ಜನಪ್ರಿಯತೆ ತಂದುಕೊಟ್ಟು, ಕ್ರಮೇಣ ಹಿಂದಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ಆ ನಂತರದ್ದೆಲ್ಲಾ ಇತಿಹಾಸ. ಹೀಗೆ ಕಷ್ಟಪಟ್ಟು ಮೇಲೆ ಬಂದ ಸುಶಾಂತ್, ಭಾನುವಾರ ನಿಗೂಢವಾಗಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಇನ್ನು ಸುಶಾಂತ್ ಅವರ ಪೋಸ್ಟ್ ಮಾರ್ಟಮ್ ನಡೆಯುತ್ತಿದ್ದು, ಸದ್ಯದಲ್ಲೇ ವರದಿ ಹೊರಬೀಳುವ ಸಾಧ್ಯತೆ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net