ಸುಶಾಂತ್​ ಸಿಂಗ್​ ಇದ್ದ ಮನೆ ಈಗ ಏನಾಗಿದೆ ಗೊತ್ತಾ?

Sushant Singh Rajaput - Final
Published on

ಮುಂಬೈ: ಕಳೆದ ವರ್ಷ ಕರೊನಾದ ಮೊದಲ ಅಲೆ ಉತ್ತುಂಗದಲ್ಲಿ ಇರುವ ಸಂದರ್ಭದಲ್ಲಿ ಬಾಲಿವುಡ್​ ನಟ ಸುಶಾಂತ್​ ಸಿಂಗ್​ ರಜಪೂತ್​ ಆತ್ಮಹತ್ಯೆ ಮಾಡಿಕೊಂಡು ನಿಧನರಾದರು. ಮುಂಬೈನ ತಮ್ಮ ಮನೆಯಲ್ಲಿ ಫ್ಯಾನ್​ಗೆ ನೇಣು ಹಾಕಿಕೊಂಡು ಸುಶಾಂತ್​ ಇನ್ನಿಲ್ಲವಾಗಿ ಒಂದು ವರ್ಷವೇ ಆಗಿದೆ. ಈಗ ಅವರ ಮನೆಯು ಬಾಡಿಗೆಗಿದ್ದು, ಅದರ ಬಗ್ಗೆ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ.

ಸುಶಾಂತ್​ ಸಿಂಗ್​ ನಿಧನರಾದಾಗಿನಿಂದ ಇಲ್ಲಿಯವರೆಗೂ ಮುಂಬೈನ ಬಾಂದ್ರಾದಲ್ಲಿರುವ ಅವರ ಫ್ಲಾಟ್​ ಖಾಲಿಯಾಗಿಯೇ ಇದೆ. ಸುಶಾಂತ್​ ಈ ಮನೆಯನ್ನು 2019ರ ಕೊನೆಗೆ ಬಾಡಿಗೆಗೆ ಪಡೆದಿದ್ದರು. ಮೂರು ವರ್ಷಗಳ ಕಾಲ ಅಗ್ರೀಮೆಂಟ್​ ಇದ್ದು, 2022ಕ್ಕೆ ಮನೆ ಖಾಲಿ ಮಾಡಬೇಕಿತ್ತು ಅಥವಾ ಅಗ್ರೀಮೆಂಟ್​ ನವೀಕರಿಸಬೇಕಿತ್ತು. ಈ ಮನೆಗೆ, ಪ್ರತಿ ತಿಂಗಳು ನಾಲ್ಕೂವರೆ ಲಕ್ಷ ರೂಪಾಯಿ ಬಾಡಿಗೆ ಕಟ್ಟುತ್ತಿದ್ದರಂತೆ ಸುಶಾಂತ್​. ಅವರು ಕೊನೆಯುಸಿರೆಳೆದ ನಂತರ ಮನೆ ಖಾಲಿಯಾಗಿದ್ದು, ಆ ಮನೆಯನ್ನು ಬೇರೆಯವರಿಗೆ ಬಾಡಿಗೆ ಕೊಡುವ ಪ್ರಯತ್ನ ನಡೆಯುತ್ತಿದೆ.

ಬಾಂದ್ರಾದ ಮಾಂಟ್​ ಬ್ಲಾಂಕ್​ ಬಿಲ್ಡಿಂಗ್​ನಲ್ಲಿರುವ 3600 ಚದರಡಿ ಇರುವ ಈ ಡ್ಯುಪ್ಲೆ ಮನೆ ಆರನೇ ಮಹಡಿಯಲ್ಲಿದೆ. ಈ ಮನೆಗೆ ಮೂರು ಕಾರ್​ ಪಾರ್ಕಿಂಗ್​ ಸಹ ನೀಡಲಾಗಿದೆ. ಈ ಮನೆಗೆ ಸುಶಾಂತ್​ ಸಿಂಗ್​ ಪ್ರತಿ ತಿಂಗಳು ನಾಲ್ಕೂವರೆ ಲಕ್ಷ ರೂ.ಗಳನ್ನು ಬಾಡಿಗೆ ಕೊಡುತ್ತಿದ್ದರು. ಮುಂದಿನ ವರ್ಷಕ್ಕೆ ಆ ಬಾಡಿಗೆ ಇನ್ನಷ್ಟು ಹೆಚ್ಚುತ್ತಿತ್ತು. ಆದರೆ, ಕಳೆದ ಒಂದು ವರ್ಷದಿಂದ ಮನೆ ಖಾಲಿ ಇರುವುದರಿಂದ ಮತ್ತು ಕರೊನಾದಿಂದ ರಿಯಲ್​ ಎಸ್ಟೇಟ್​ ವ್ಯವಹಾರದಲ್ಲಿ ಇಳಿಮುಖವಾಗಿರುವುದರಿಂದ, ಬಾಡಿಗೆ ಸಹ ಕಡಿಮೆ ಆಗಿದೆ.

ಈಗ ಈ ಮನೆಯ ಬಾಡಿಗೆ ನಾಲ್ಕು ಲಕ್ಷ ರೂ.ಗಳಾಗಿದ್ದು, ಕಳೆದ ಕೆಲವು ತಿಂಗಳುಗಳಿಂದ ಸೂಕ್ತ ಬಾಡಿಗೆದಾರರಿಗೆ ಹುಡುಕಾಟ ನಡೆಸಲಾಗುತ್ತಿದೆ. ಆದರೆ, ಇದುವರೆಗೂ ಸುಶಾಂತ್​ ಇದ್ದ ಮನೆಗೆ ಬಾಡಿಗೆದಾರರು ಬಂದಿಲ್ಲ. ಬಾಲಿವುಡ್​ನ ಕೆಲವು ನಟ-ನಟಿಯರಿಗೆ ಈ ಮನೆ ತೋರಿಸಲಾಗಿದೆಯಾದರೂ, ಮನೆಗೆ ಬರುವುದಕ್ಕೆ ಇದುವರೆಗೂ ಯಾರೂ ಆಸಕ್ತಿ ತೋರಿಸಿಲ್ಲವಂತೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net