

ಬೆಂಗಳೂರು: ಅಭಿಮಾನಿಗಳ ಕಾತರಕ್ಕೆ ಕೊನೆಗೂ ಉತ್ತರ ಸಿಕ್ಕಿದೆ. ಪ್ರಶಾಂತ್ ನೀಲ್ ನಿರ್ದೇಶನದ ಹೊಸ ಸಿನಿಮಾವನ್ನು ಹೊಂಬಾಳೆ ಫಿಲಂಸ್ ಘೋಷಣೆ ಮಾಡಿದೆ. ಈ ಮೂಲಕ ಸಲಾರ್ ಶೀರ್ಷಿಕೆಯ ಸಿನಿಮಾದಿಂದ ಪ್ರಭಾಸ್ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾಕ್ಕೆ ನಾಯಕರಾಗುತ್ತಿದ್ದಾರೆ.
ಸದ್ಯ ಪೋಸ್ಟರ್ ಮತ್ತು ಶೀರ್ಷಿಕೆಯನ್ನು ಬಿಡುಗಡೆ ಮಾಡಿಕೊಂಡಿರುವ ತಂಡ, ಈ ಚಿತ್ರವನ್ನು ಇಂಡಿಯನ್ ಸಿನಿಮಾ ಎಂದು ಘೋಷಿಸಿಕೊಂಡಿದೆ. ಕನ್ನಡದ ಜತೆಗೆ ಭಾರತದ ಹತ್ತಾರು ಭಾಷೆಗಳಲ್ಲಿ ಈ ಸಿನಿಮಾವನ್ನು ತೆರೆಗೆ ತರುವ ಬಗ್ಗೆಯೂ ಈಗಾಗಲೇ ನಿರ್ಮಾಣ ಸಂಸ್ಥೆ ಹೇಳಿಕೊಂಡಿದ್ದು, 100 ಕೋಟಿಗೂ ಅಧಿಕ ಬಜೆಟ್ನಲ್ಲಿ ಈ ಸಿನಿಮಾ ಮೂಡಿಬರಲಿದೆ.
ಅಂದಹಾಗೆ, ಕೆಜಿಎಫ್ 2 ಸಿನಿಮಾದ ಕೊನೇ ಹಂತದ ಕೆಲಸಗಳಲ್ಲಿರುವ ನಿರ್ದೇಶಕ ಪ್ರಶಾಂತ್ ನೀಲ್, ಸಲಾರ್ ಚಿತ್ರವನ್ನು 2021ರ ಜನವರಿಯಿಂದ ಶೂಟಿಂಗ್ ಆರಂಭಿಸಲಿದ್ದಾರೆ. ಹಾಗಾದರೆ, ಏನಿದು ಸಲಾರ್? ಅಷ್ಟಕ್ಕೂ ಸಲಾರ್ ಎಂಬುದು ಉರ್ದು ಪದ. ಕನ್ನಡದಲ್ಲಿ ಸಲಾರ್ ಎಂದರೆ ನಾಯಕ ಎಂದರ್ಥ.
‘ದಿ ಮೋಸ್ಟ್ ವೈಲೆಂಟ್ ಮೆನ್, ಕಾಲ್ಡ್ ಒನ್ ಮ್ಯಾನ್.. ದಿ ಮೋಸ್ಟ್ ವೈಲೆಂಟ್..’ ಎಂಬ ಅಡಿಬರಹವೂ ಕುತೂಹಲ ಮೂಡಿಸಿದ್ದು, ಈ ಸಿನಿಮಾ ಉಗ್ರಂ ಚಿತ್ರದ ರಿಮೇಕ್ ಎಂದೇ ಹೇಳಲಾಗುತ್ತಿದೆ. 2014ರಲ್ಲಿ ಉಗ್ರಂ ಸಿನಿಮಾ ಬಿಡುಗಡೆಯಾದಾಗಲೇ ಅದರ ರಿಮೇಕ್ನಲ್ಲಿ ಪ್ರಭಾಸ್ ನಟಿಸಲಿದ್ದಾರೆ ಎಂಬ ಸುದ್ದಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಇದೀಗ ಆರು ವರ್ಷಗಳ ಬಳಿಕ ಆ ಸುದ್ದಿ ನಿಜವಾಗುತ್ತಿದೆ ಎಂದೇ ಹೇಳಲಾಗುತ್ತಿದೆ. ಈ ಬಗ್ಗೆ ಇನ್ನಷ್ಟೇ ಚಿತ್ರತಂಡ ಅಧಿಕೃತವಾಗಿ ಹೇಳಿಕೊಳ್ಳಬೇಕಿದೆ.
ವಿಜಯ್ ಕಿರಗಂದೂರು ಚಿತ್ರಕ್ಕೆ ಬಂಡವಾಳ ಹೂಡಲಿದ್ದು, ಸ್ಟಾರ್ ಕಲಾವಿದರ ದಂಡೇ ಚಿತ್ರದಲ್ಲಿರಲಿದೆ. ಸದ್ಯ ಪ್ರಭಾಸ್ ಕೈಯಲ್ಲಿ ಪ್ರಸ್ತುತ ಮೂರು ಸಿನಿಮಾಗಳಿವೆ. ಅವುಗಳಲ್ಲಿ ರಾಧೆ ಶ್ಯಾಮ್ ಬಹುತೇಕ ಮುಕ್ತಾಯದ ಹಂತದಲ್ಲಿದ್ದು, ಅದಾದ ಬಳಿಕ ಸಲಾರ್ ಚಿತ್ರ ಕೈಗೆತ್ತಿಕೊಳ್ಳಲಿದ್ದಾರೆ. ಜತೆಯಲ್ಲಿ ಆದಿಪುರುಷ್ ಮತ್ತು ನಾಗ್ ಅಶ್ವಿನ್ ನಿರ್ದೇಶನದ ಸಿನಿಮಾದ ಭಾಗವಾಗಲಿದ್ದಾರೆ.