ಬರೀ ಇಬ್ಬರಲ್ಲ, ಇನ್ನೂ ನಾಲ್ವರಿದ್ದಾರೆ!; ತಿಹಾರ್ ಜೈಲ್​ನಲ್ಲೇ ನಟಿಯರ ಜತೆ ಮೀಟಿಂಗ್

Fraud
Published on

ವಂಚಕ ಸುಕೇಶ್ ಚಂದ್ರಶೇಖರ್ ಮೋಸದ ಜಾಲ ಅಗೆದಷ್ಟೂ ಆಳ, ಅಗಲವಾಗುತ್ತಿದೆ. ಹೊಸಹೊಸ ಮಾಹಿತಿಗಳು ಬರುತ್ತಲೇ ಇವೆ. ಇದುವರೆಗೆ ಬಾಲಿವುಡ್ ನಟಿಯರಾದ ಜಾಕ್​ಲೀನ್ ಫರ್ನಾಂಡಿಸ್, ನೋರಾ ಫತೇಹಿಗೆ ಸುಕೇಶ್ ಲಕ್ಷಾಂತರ ಮೌಲ್ಯದ ಉಡುಗೊರೆಗಳನ್ನು ನೀಡಿದ್ದ ಎಂಬ ಮಾಹಿತಿ ಇದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ಆಗೊಮ್ಮೆ ಈಗೊಮ್ಮೆ ಇವರನ್ನು ಕರೆದು ವಿಚಾರಣೆಗೆ ಒಳಪಡಿಸುತ್ತಿರುವುದೂ ಗೊತ್ತಿದೆ. ಆದರೆ, 2018ರ ಜನವರಿಯಿಂದ ಮೇ ತಿಂಗಳವರೆಗೆ ಇನ್ನೂ ನಾಲ್ವರು ನಟಿಮಣಿಯರನ್ನು ಸುಕೇಶ್ ಸಂಪರ್ಕಿಸಿದ್ದ. ಮಾತ್ರವಲ್ಲ ತಾನಿದ್ದ ತಿಹಾರ್ ಜೈಲಿಗೇ ಕೆಲವರನ್ನು ಕರೆಸಿಕೊಂಡು ಭೇಟಿಯಾಗಿದ್ದ ಎಂಬ ಮಾಹಿತಿ ಈಗ ಬಹಿರಂಗವಾಗಿದೆ.

ನಟಿಯರಾದ ನಿಕಿ ತಂಬೋಲಿ, ಚಾಹತ್ ಖನ್ನಾ, ಸೋಫಿಯಾ ಸಿಂಗ್ ಹಾಗೂ ಆರುಷಿ ಪಾಟೀಲ್​ರನ್ನು ಈ ರೀತಿ ಸುಕೇಶ್ ಜೈಲಿನಲ್ಲಿ ಭೇಟಿಯಾಗಿದ್ದನಂತೆ. ಮುಂಬೈನಿಂದ ದೆಹಲಿಗೆ ವಿಮಾನದ ಟಿಕೆಟ್ ಬುಕ್ ಮಾಡಿಸಿ, ಫೈವ್ ಸ್ಟಾರ್ ಹೋಟೆಲ್​ನಲ್ಲಿ ಕೊಠಡಿ ಮಾಡಿಕೊಟ್ಟು, ಅಲ್ಲಿಂದ ತಿಹಾರ್ ಜೈಲಿನವರೆಗೂ ಬಿಎಂಡಬ್ಲ್ಯೂ ಕಾರ್ ವ್ಯವಸ್ಥೆ ಮಾಡಿದ್ದ ಸುಕೇಶ್, ಜೈಲಿನ ಗೇಟ್​ನಿಂದ ತಾನಿದ್ದ ಕೊಠಡಿವರೆಗೂ ಇನ್ನೋವಾ ಕಾರ್​ನಲ್ಲಿ ಕರೆಸಿಕೊಳ್ಳುತ್ತಿದ್ದನಂತೆ. ಆತನ ಕೊಠಡಿಗೆ ಜೈಲು ಅಧಿಕಾರಿಗಳೇ ಕರೆದುಕೊಂಡು ಹೋಗಿ, ಬಾಗಿಲು ಕಾಯುತ್ತಿದ್ದರು ಎಂದು ಕೆಲವರು ಮಾಹಿತಿ ನೀಡಿದ್ದಾರೆ. ಕೊಠಡಿಯ ಒಳಗೆ ದೊಡ್ಡ ಪರದೆ ಟಿವಿ, ಸೋಫಾಗಳು, ಕೂಲರ್ ಜತೆಗೆ ಲಕ್ಷಾಂತರ ರೂಪಾಯಿ ಮೌಲ್ಯದ ವಿದೇಶಿ ಬ್ರಾಂಡೆಡ್ ಬ್ಯಾಗ್​ಗಳು, ವಾಚ್​ಗಳು

ಇರುತ್ತಿದ್ದವು ಎನ್ನಲಾಗಿದೆ. ತಾನು ದಕ್ಷಿಣ ಭಾರತದ ದೊಡ್ಡ ನಿರ್ವಪಕನೆಂದು ಹೇಳಿಕೊಂಡು ಕೆಲ ಹೊತ್ತು ಆ ನಟಿಯರ ಜತೆ ಮಾತನಾಡಿ ಅವರಿಗೆ 1 ರಿಂದ 2 ಲಕ್ಷದವರೆಗೂ ಹಣ ಹಾಗೂ ಗಿಫ್ಟ್ ಗಳನ್ನು ಕೊಡುತ್ತಿದ್ದನಂತೆ. ಬಳಿಕ ವಾಟ್ಸಾಪ್ ಮೂಲಕ ಅವರ ಜತೆ ಸಂಪರ್ಕದಲ್ಲಿರುತ್ತಿದ್ದ ಆತ, 15-20 ದಿನಗಳಲ್ಲಿ ಮತ್ತೆ ಒಂದೂವರೆಯಿಂದ ಎರಡು ಲಕ್ಷ ರೂಪಾಯಿವರೆಗೂ ನೀಡಿದ್ದ ಎನ್ನಲಾಗಿದೆ. -ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net