ಪುನೀತ್ ರಾಜಕುಮಾರ್​ ಜನ್ಮದಿನ ಇನ್ಮುಂದೆ ಸ್ಫೂರ್ತಿ ದಿನ: ಸರ್ಕಾರದ ವತಿಯಿಂದಲೇ ಆಚರಣೆ ಎಂದು ಸಿಎಂ ಘೋಷಣೆ

Puneeth Rajkumar 1
Published on

ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಜನ್ಮದಿನವನ್ನು (ಮಾರ್ಚ್ 17) ಸ್ಫೂರ್ತಿ ದಿನ ಎಂಬುದಾಗಿ ಸರ್ಕಾರದ ವತಿಯಿಂದಲೇ ಆಚರಣೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ.

ಬೆಂಗಳೂರಿನ ಚೌಡಯ್ಯ ಸ್ಮಾರಕ ಸಭಾಭವನದಲ್ಲಿ ಇಂದು ನಡೆದ ಬ್ರಹ್ಮರ್ಷಿ ನಾರಾಯಣಗುರು ಜಯಂತಿ ಕಾರ್ಯಕ್ರಮದಲ್ಲಿ ಕನ್ನಡ, ಸಂಸ್ಕ್ರತಿ ಹಾಗೂ ಇಂಧನ ಸಚಿವ ವಿ. ಸುನೀಲ್ ಕುಮಾರ್, ಪುನೀತ್ ರಾಜಕುಮಾರ್​ ಅವರ ಜನ್ಮದಿನವನ್ನು ಸ್ಫೂರ್ತಿ ದಿನವಾಗಿ ಆಚರಣೆ ಮಾಡಬೇಕೆಂದು ಮಾಡಿಕೊಂಡ ಮನವಿಗೆ ಸ್ಪಂದಿಸಿದ ಅವರು ಈ ಭರವಸೆ ನೀಡಿದ್ದಾರೆ.

ಪುನೀತ್​ ಅಕಾಲಿಕವಾಗಿ ನಮ್ಮನ್ನು ಅಗಲಿದ್ದಾರೆ. ಅವರು ವೈಯಕ್ತಿಕವಾಗಿ ನನಗೆ ಅತ್ಯಂತ ಪ್ರೀತಿಪಾತ್ರ ವ್ಯಕ್ತಿಯಾಗಿದ್ದರು. ನಾಡಿನ ಕೋಟ್ಯಂತರ ಯುವಕರಿಗೆ ಅವರು ಸ್ಫೂರ್ತಿಯಾಗಿದ್ದರು. ಈ ಹಿನ್ನೆಲೆಯಲ್ಲಿ ಅವರ ಜನ್ಮದಿನವನ್ನು ಸ್ಫೂರ್ತಿ ದಿನ ಎಂದು ಸರ್ಕಾರದ ವತಿಯಿಂದಲೇ ಆಚರಣೆ ಮಾಡಲಾಗುವುದು ಎಂದು ಹೇಳಿದರು.

ಪ್ರತ್ಯೇಕ ನಿಧಿ: ಈಡಿಗ- ಬಿಲ್ಲವ ಸಮುದಾಯದ ವಿದ್ಯಾರ್ಥಿಗಳ ಶೈಕ್ಷಣಿಕ ಹಾಗೂ ಇನ್ನಿತರ ಅಭಿವೃದ್ಧಿಗೆ ಪ್ರತ್ಯೇಕ ನಿಧಿಯನ್ನು ಪ್ರಾರಂಭಿಸಲಾಗುವುದು.‌ ಈ ವರ್ಷದ ಬಜೆಟ್​ನಲ್ಲೇ ಇದಕ್ಕೆ ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದು ಸಿಎಂ ಹೇಳಿದರು.

ಬ್ರಹ್ಮರ್ಷಿ ನಾರಾಯಣಗುರು ಶ್ರೇಷ್ಠ ಆಧ್ಯಾತ್ಮಿಕ ಸಂತರು. ಅವರನ್ನು ಒಂದು ಜಾತಿ ಹಾಗೂ ಧರ್ಮಕ್ಕೆ ಸೀಮಿತ ಮಾಡುವುದಕ್ಕೆ ಸಾಧ್ಯವಿಲ್ಲ. ಇಡೀ ಜಗತ್ತಿಗೆ ಅವರ ತತ್ತ್ವ ಮಾರ್ಗದರ್ಶಿಯಾಗಿದೆ. ಬೆಂಗಳೂರಿನಲ್ಲಿ ನಾರಾಯಣಗುರು ಹೆಸರಿನಲ್ಲಿ ಸಮುದಾಯಭವನ ಸ್ಥಾಪನೆ ಮಾಡುವುದಕ್ಕಾಗಿ ಸರ್ಕಾರದಿಂದ 5 ಕೋಟಿ ರೂ. ಮಂಜೂರು ಮಾಡಲಾಗುವುದು ಎಂದು ಭರವಸೆ ನೀಡಿದರು.

ನೆಲಮಂಗಲ ಸಮೀಪ ಇರುವ ಸೋಲೂರು ಆರ್ಯ-ಈಡಿಗ ಮಠ ಪ್ರಾರಂಭಿಸಿರುವ ಶೈಕ್ಷಣಿಕ ಚಟುವಟಿಕೆ ಹಾಗೂ ಶೈಕ್ಷಣಿಕ ಸಂಸ್ಥೆಗಳ ನಿರ್ಮಾಣಕ್ಕೆ ಸರ್ಕಾರದಿಂದ ಜಾಗ ನೀಡಲಾಗುವುದು ಎಂಬ ಭರವಸೆಯನ್ನೂ ಅವರು ನೀಡಿದರು.

Koo App
ಕೋಟ್ಯಂತರ ಅಭಿಮಾನಿಗಳ ʼಅಪ್ಪುʼ, ಪವರ್‌ಸ್ಟಾರ್‌ ಶ್ರೀ ಪುನೀತ್‌ ರಾಜ್‌ಕುಮಾರ್‌ ಅವರ ಜನ್ಮದಿನವಾದ ಮಾರ್ಚ್‌ 17 ರಂದು ʼಸ್ಪೂರ್ತಿ ದಿನʼ ಆಚರಿಸುವುದಾಗಿ ಮಾನ್ಯ ಮುಖ್ಯಮಂತ್ರಿ ಶ್ರೀ @bsbommai ಅವರು ಮಾಡಿದ ಪ್ರಕಟಣೆ ಶ್ಲಾಘನೀಯ. ಕಲಾಸೇವೆಯೊಂದಿಗೆ ಸಮಾಜ ಸೇವೆ ಮಾಡಿದ ಶ್ರೀ ಪುನೀತ್‌ ಅವರಿಗೆ ಇದು ಉತ್ತಮ ಗೌರವ. #PuneethRajkumar
View attached media content
-Araga Jnanendra (@aragajnanendra)16 Sep 2022
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net