ಕೆಜಿಎಫ್​-2 ಚಿತ್ರದ ಪ್ರೇರಣೆ; 72 ಗಂಟೆಗಳಲ್ಲಿ 3 ಸೆಕ್ಯುರಿಟಿ ಗಾರ್ಡ್​ಗಳ ಕೊಲೆ: ನಿದ್ರೆಗೆಟ್ಟ ಕೈದಿಗಳು..

Shivaprasad Dhruve
Published on

ಭೋಪಾಲ್​: ಭಾರಿ ಅಪರಾಧಗಳನ್ನು ಮಾಡಿದ ಹುಂಬ ಧೈರ್ಯದವರೇ ಜೈಲುಗಳಲ್ಲಿ ಇರುವುದು ಹೆಚ್ಚು. ಆದರೆ ಅಂಥ ಕೈದಿಗಳು ಕೂಡ ಹೆದರಿ ನಿದ್ರೆಗೆಡುವಂತೆ ಮಾಡಿದ್ದಾನೆ ಈ ಸರಣಿ ಹಂತಕ. ಈತನ ಭಯಕ್ಕೆ ಜೈಲಿನಲ್ಲಿ ಯಾರೂ ನೆಮ್ಮದಿಯಾಗಿ ನಿದ್ರೆ ಮಾಡದಂತಾಗಿದೆ. ಏಕೆಂದರೆ ಈತ ವಿನಾಕಾರಣ ತಲೆ ಒಡೆದು ಸಾಯಿಸುವ ಚಾಳಿಯವ.

ನಗನಗುತ್ತಲೇ ಇರುವ ಈತ ದೊಡ್ಡ ಪಾತಕಿ. ಬರೀ 19 ವರ್ಷದ ಈ ಸರಣಿ ಹಂತಕನ ಹೆಸರು ಶಿವಪ್ರಸಾದ್ ಧುರ್ವೆ. ಇವನು ಮಧ್ಯಪ್ರದೇಶದ ಭೋಪಾಲ್​ನ ಸಾಗರ್ ಎಂಬಲ್ಲಿ ರಾತ್ರಿ ಮಲಗಿದ್ದ ಮೂವರು ಸೆಕ್ಯುರಿಟಿ ಗಾರ್ಡ್​ಗಳನ್ನು ತಲೆ ಒಡೆದು ಸಾಯಿಸಿದ್ದ. ಈತ ಈ ಮೂರು ಕೊಲೆಗಳನ್ನು ಬರೀ 72 ಗಂಟೆಗಳ ಅವಧಿಯಲ್ಲಿ ಮಾಡಿದ್ದ. ಈತನನ್ನು ಸೆ. 2ರಂದು ಬಂಧಿಸಿರುವ ಪೊಲೀಸರು ಜೈಲಿನಲ್ಲಿ ಇರಿಸಿದ್ದಾರೆ.

ಆದರೆ ಈತ ಯಾವುದೇ ಕಾರಣವಿಲ್ಲದೆ ಮಲಗಿದ್ದವರ ತಲೆ ಒಡೆದು ಸಾಯಿಸುವವ ಎಂಬ ಸುದ್ದಿ ಜೈಲಿಗೂ ವ್ಯಾಪಿಸಿದ್ದು, ಅಲ್ಲಿನ ಕೈದಿಗಳು ಮಾತ್ರವಲ್ಲದೆ, ಜೈಲಿನ ಸಿಬ್ಬಂದಿ ಕೂಡ ನೆಮ್ಮದಿಯಾಗಿ ನಿದ್ರಿಸದ ಹಾಗಾಗಿದೆ. ಇಲ್ಲಿನ ಬ್ಯಾರಕ್​ನಲ್ಲಿ ಸುಮಾರು 2 ಸಾವಿರ ಕೈದಿಗಳಿದ್ದು, ಮುಂಜಾಗ್ರತೆ ಕ್ರಮವಾಗಿ ಈತನನ್ನು ಪೊಲೀಸರು ಪ್ರತ್ಯೇಕ ಜೈಲುಕೋಣೆಯಲ್ಲಿ ಇರಿಸಿದ್ದಾರೆ.

ಫೇಮಸ್ ಆಗುವ ಕಾರಣಕ್ಕೆ ತಾನು ಹೀಗೆ ಮಾಡುತ್ತಿರುವುದಾಗಿ ಈತ ಪೊಲೀಸರಿಗೆ ಹೇಳಿದ್ದಾನೆ ಎನ್ನಲಾಗಿದೆ. ವಿಕ್ಷಿಪ್ತವಾಗಿ ವರ್ತಿಸುತ್ತಿರುವ ಈತ ತಾನು ಇದನ್ನೆಲ್ಲ ಮಾಡುತ್ತಿರುವುದು ಕೆಜಿಎಫ್​-2 ಚಿತ್ರದ ರಾಕಿಭಾಯ್ ಪ್ರೇರಣೆಯಿಂದ ಮತ್ತು ತನ್ನ ಮುಂದಿನ ಗುರಿ ಪೊಲೀಸರು ಎಂಬುದಾಗಿಯೂ ಹೇಳಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net