'ಶುಗರ್​ಲೆಸ್' ಚಿತ್ರೀಕರಣ ಮುಕ್ತಾಯ ... ಗೆಟಪ್​ ಬದಲಿಸಿದ ಪೃಥ್ವಿ

Sugarless - Final
Published on

ಬೆಂಗಳೂರು: ಲಾಕ್​ಡೌನ್​ ನಂತರ ಪ್ರಾರಂಭವಾದ ಸಿನಿಮಾಗಳ ಪೈಕಿ ಕೆಲವು ಸಿನಿಮಾಗಳು ಸದ್ದಿಲ್ಲದೆ ಮುಗಿದಿವೆ ಮತ್ತು ಇನ್ನೂ ಕೆಲವು ಸಿನಿಮಾಗಳು ಮುಕ್ತಾಯದ ಹಂತಕ್ಕೆ ಬಂದಿವೆ. ಮುಗಿದಿರುವ ಚಿತ್ರಗಳ ಸಾಲಿಗೆ ಇದೀಗ 'ಶುಗರ್​ಲೆಸ್​' ಸಹ ಸೇರಿಕೊಂಡಿದೆ.

ಈ ಹಿಂದೆ 'ಡಾಟರ್ ಆಫ್ ಪಾರ್ವತಮ್ಮ' ಚಿತ್ರವನ್ನು ನಿರ್ಮಿಸಿದ್ದ ಶಶಿಧರ ಕೆ.ಎಂ, ಮೊದಲ ಬಾರಿಗೆ ಕಥೆ ಬರೆದು ನಿರ್ದೇಶಿಸಿರುವ ಚಿತ್ರ 'ಶುಗರ್​ಲೆಸ್​'. ಬರೀ ಕಥೆ ಮತ್ತು ನಿರ್ದೇಶನವಷ್ಟೇ ಅಲ್ಲ, ನಿರ್ಮಾಣದ ಜವಾಬ್ದಾರಿಯೂ ಅವರದ್ದೇ. ಈ ಚಿತ್ರಕ್ಕೆ ನಲವತೈದು ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದ್ದು, ಇದೀಗ ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳು ಪ್ರಾರಂಭವಾಗಿದೆ.

ಇದೀಗ ಚಿತ್ರೀಕರಣ ಮುಗಿದಿರುವ ಹಿನ್ನೆಲೆಯಲ್ಲಿ ನಟ ಪೃಥ್ವಿ ಅಂಬರ್​ ತಮ್ಮ ಗೆಟಪ್​ ಬದಲಿಸಿದ್ದಾರೆ. ಈ ಚಿತ್ರದಲ್ಲಿ ಬೇರೆ ಗೆಟಪ್​ನಲ್ಲಿ ಕಾಣಿಸಿಕೊಂಡಿದ್ದ ಪೃಥ್ವಿ, ಈ ಚಿತ್ರದ ಚಿತ್ರೀಕರಣವನ್ನು ಮುಗಿಸಿ, 'ಶಿವಪ್ಪ' ಚಿತ್ರಕ್ಕಾಗಿ ಇನ್ನೊಂದು ಗೆಟಪ್​ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಅವರು 'ಶಿವಪ್ಪ' ಚಿತ್ರದ ಚಿತ್ರೀಕರಣದಲ್ಲಿ ಭಾಗವಹಿಸಿದ್ದಾರೆ.

ಡಯಾಬಿಟಿಸ್​ ಇರುವ ವ್ಯಕ್ತಿಯೊಬ್ಬ ಅನುಭವಿಸುವ ಸಮಸ್ಯೆಗಳನ್ನು ಹಾಸ್ಯಮಯವಾಗಿ ಹೇಳುವ ಈ ಚಿತ್ರದಲ್ಲಿ ಪೃಥ್ವಿಗೆ ನಾಯಕಿಯಾಗಿ ಪ್ರಿಯಾಂಕಾ ತಿಮ್ಮೇಶ್​​ ನಟಿಸಿದ್ದು, ಮಿಕ್ಕಂತೆ ದತ್ತಣ್ಣ, ರಾಕ್​ಲೈನ್​ ಸುಧಾಕರ್​ ಸೇರಿದಂತೆ ಹಲವರು ನಟಿಸಿದ್ದಾರೆ. ಈ ಚಿತ್ರಕ್ಕೆ ಲವಿತ್​ ಛಾಯಾಗ್ರಹಣ ಮಾಡಿದ್ದು, ಅನೂಪ್​ ಸೀಳಿನ್​ ಸಂಗೀತ ಸಂಯೋಜಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net