

ಶನಿವಾರ ಸಂಜೆ ಬೆಂಗಳೂರಿನಲ್ಲಿ ನಡೆದ 'ಗಂಧದ ಗುಡಿ' ಚಿತ್ರದ 'ಪುನೀತ ಪರ್ವ' ಎಂಬ ಪ್ರೀ-ರಿಲೀಸ್ ಇವೆಂಟ್ ಕಾರ್ಯಕ್ರಮಕ್ಕೆ ದಕ್ಷಿಣ ಭಾರತದ ಜನಪ್ರಿಯ ನಟರ ಜತೆಗೆ ಕನ್ನಡ ಚಿತ್ರರಂಗದ ಹಲವು ಸ್ಟಾರ್ ನಟರು ಭಾಗವಹಿಸಿದ್ದರು. ಆದರೆ, ಈ ಕಾರ್ಯಕ್ರಮದಲ್ಲಿ ಸುದೀಪ್ ಮಾತ್ರ ಈ ಇವೆಂಟ್ನ ಭಾಗಿಯಾಗಿರಲಿಲ್ಲ. ಸುದೀಪ್ ಅವರ ಗೈರುಹಾಜರಿಯ ಕುರಿತಾಗಿ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಟೀಕೆಗಳು ಸಹ ವ್ಯಕ್ತವಾದವು. ಈಗ ಸುದೀಪ್ ಆ ಕಾರ್ಯಕ್ರಮಕ್ಕೆ ಬರಲಿಲ್ಲ ಎಂಬ ಅಸಲಿ ಕಾರಣ ಗೊತ್ತಾಗಿದೆ.
ಈ ಕಾರ್ಯಕ್ರಮಕ್ಕೆ ಸುದೀಪ್ ಬರದಿರುವುದಕ್ಕೆ ನಿಜವಾದ ಕಾರಣ ಎಂದರೆ, ಅವರು ತಮ್ಮ ಪತ್ನಿ ಜತೆಗೆ ಆಸ್ಟ್ರೇಲಿಯಾದಲ್ಲಿದ್ದಾರೆ. ಅಷ್ಟೇ ಅಲ್ಲ, ಭಾನುವಾರ ನಡೆದ ಭಾರತ ಮತ್ತು ಪಾಕಿಸ್ತಾನ ನಡುವಿನ ಮ್ಯಾಚ್ಗೆ ಅವರು ಸಾಕ್ಷಿಯಾಗಿದ್ದಾರೆ.
ಈ ಕುರಿತು ಟ್ವಿಟರ್ನಲ್ಲಿ ಬರೆದುಕೊಂಡಿರುವ ಸುದೀಪ್, 'ಮಹಾರಾಜನು ಎಲ್ಲಿದ್ದರೂ ಮಹಾರಾಜ ತಾನೇ ... ಈ ಪಂದ್ಯವನ್ನು ಲೈವ್ ಆಗಿ ವೀಕ್ಷಿಸುವುದೇ ಒಂದು ದೊಡ್ಡ ಗೌರವ' ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ, ಹಾರ್ದಿಕ್ ಪಾಂಡ್ಯ ಬಗ್ಗೆಯೂ ಮೆಚ್ಚುಗೆ ಸೂಚಿಸಿರುವ ಸುದೀಪ್, 'ನೀವು ತಾಳ್ಮೆಯಿಂದ ಆಡದಿದ್ದರೆ, ಇದು ಸಾಧ್ಯವಾಗುತ್ತಿರಲಿಲ್ಲ. ಹ್ಯಾಟ್ಸ್ ಆಫ್' ಎಂದಿದ್ದಾರೆ.
ಪ್ರಿಯಾ ಸುದೀಪ್ ಸಹ ಬಗ್ಗೆ ಈ ಬರೆದಿದ್ದು, 'ಇಂಥದ್ದೊಂದು ಪಂದ್ಯ ನೋಡಬೇಕೆಂದರೆ ನಿಜಕ್ಕೂ ಅದೃಷ್ಟ ಮಾಡಿದರು. ಒತ್ತಡದಲ್ಲಿ ಆಡುವುದು ಸುಲಭವಲ್ಲ. ಅಂಥ ಒತ್ತಡದ ಮಧ್ಯೆಯೂ ವಿರಾಟ್ ಕೋಹ್ಲಿ ಅವರು ಭಾರತಕ್ಕೆ ಒಂದು ಮರೆಯಲಾಗದ ಗೆಲುವನ್ನು ತಂದುಕೊಟ್ಟಿದ್ದಾರೆ' ಎಂದು ಹೇಳಿದ್ದಾರೆ.
ಕಳೆದ ಕೆಲವು ದಿನಗಳಿಂದ ಆಸ್ಟ್ರೇಲಿಯಾದಲ್ಲೇ ಬೀಡುಬಿಟ್ಟಿರುವ ಸುದೀಪ್ ದಂಪತಿ ಈ ವಾರಾಂತ್ಯಕ್ಕೆ ಬೆಂಗಳೂರಿಗೆ ವಾಪಸ್ಸಾಗುವ ನಿರೀಕ್ಷೆ ಇದೆ.