ಮಾತು ಮುಗಿಸಿದ ವಿಕ್ರಾಂತ್ ರೋಣ; ಅನುಭವ ಹಂಚಿಕೊಂಡ ಕಿಚ್ಚ ಸುದೀಪ್​..

Rona
Published on

ಬೆಂಗಳೂರು: ಅನೂಪ್​ ಭಂಡಾರಿ ನಿರ್ದೇಶನ, ಕಿಚ್ಚ ಸುದೀಪ್ ಅಭಿನಯದಲ್ಲಿ ಮೂಡಿ ಬರುತ್ತಿರುವ ಬಹುನಿರೀಕ್ಷಿತ ಅದ್ಧೂರಿ ಸಿನಿಮಾ ವಿಕ್ರಾಂತ್ ರೋಣ ಕುರಿತು ಸಿನಿಮಾಪ್ರಿಯರು, ಅದರಲ್ಲೂ ಸುದೀಪ್ ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ. ಈಗ ತಮ್ಮ ಸಿನಿಮಾ ಕುರಿತು ಸುದೀಪ್ ಅನುಭವ ಹಂಚಿಕೊಂಡಿದ್ದು, ಅಭಿಮಾನಿಗಳ ಕಾತರ-ಕೌತುಕವನ್ನು ಮತ್ತಷ್ಟು ಹೆಚ್ಚಿಸಿದೆ.

ವಿಕ್ರಾಂತ್ ರೋಣ ಸಿನಿಮಾದ ವಾಯ್ಸ್ ಡಬ್ಬಿಂಗ್​ ಇಂದು ಮುಗಿಸಿದೆ. ಅದೊಂದು ಅದ್ಭುತ ಅನುಭವ, ಪಾತ್ರದೆಡೆಗೊಂದು ಹೊಸ ಸ್ಪಂದನೆ ಎಂದು ಡಬ್ಬಿಂಗ್ ಅನುಭವ ಹೇಳಿಕೊಂಡಿರುವ ಸುದೀಪ್, ಚಿತ್ರದ 3ಡಿ ಆವೃತ್ತಿಯ ಕೆಲವು ತುಣುಕುಗಳನ್ನು ವೀಕ್ಷಿಸಿರುವುದಾಗಿಯೂ ತಿಳಿಸಿದ್ದಾರೆ. ವಿಕ್ರಾಂತ್ ರೋಣ ಸಿನಿಮಾ ಆಗಿ ಜೀವ ಪಡೆಯುತ್ತಿರುವುದನ್ನು ನೋಡಿ ಥ್ರಿಲ್ ಆಗುತ್ತಿದ್ದು, ಸದ್ಯದಲ್ಲೇ ಹಾಡುಗಳ ಚಿತ್ರೀಕರಣದಲ್ಲಿ ಭಾಗವಹಿಸಲಿರುವುದಾಗಿಯೂ ಮಾಹಿತಿ ನೀಡಿದ್ದಾರೆ.

ಇದು 3ಡಿ ಫ್ಯಾಂಟಸಿ ಆ್ಯಕ್ಷನ್ ಅಡ್ವೆಂಚರ್ ಥ್ರಿಲ್ಲರ್ ಸಿನಿಮಾ ಆಗಿದ್ದು, ಇದರಲ್ಲಿ ಸುದೀಪ್ ಜತೆಗೆ ನಿರೂಪ್ ಭಂಡಾರಿ, ನೀತಾ ಅಶೋಕ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಶಾಲಿನಿ ಜಾಕ್​ ಮಂಜು, ಅಲಂಕಾರ್ ಪಾಂಡ್ಯನ್ ನಿರ್ಮಾಣದ ಈ ಸಿನಿಮಾಗೆ ಅಜನೀಶ್ ಲೋಕನಾಥ್ ಸಂಗೀತ ಸಂಯೋಜನವಿದೆ. ಈ ಚಿತ್ರವನ್ನು ಆಗಸ್ಟ್ 19ರಂದು ಬಿಡುಗಡೆ ಮಾಡುವ ಗುರಿ ಇರಿಸಿಕೊಂಡಿದೆ ಸಿನಿತಂಡ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net