15 ವರ್ಷಗಳ ನಂತರ ರಾಜಮೌಳಿ ಚಿತ್ರದಲ್ಲಿ ಶ್ರೀಯಾ!

Sriya Saran Final
Published on

ಈ ಹಿಂದೆ ರಾಜಮೌಳಿ ನಿರ್ದೇಶನದ ಛತ್ರಪತಿ ಚಿತ್ರದಲ್ಲಿ ನಾಯಕಿಯಾಗಿದ್ದ ಶ್ರೀಯಾ ಶರಣ್​, ಇದೀಗ 15 ವರ್ಷಗಳ ನಂತರ ಮತ್ತೊಮ್ಮೆ ಅವರ ಚಿತ್ರದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹಾಗಂತ ರಾಜಮೌಳಿ ಬಾಯಿ ಬಿಡದಿದ್ದರೂ, ಖುದ್ದು ಶ್ರೀಯಾ ಹೇಳಿಕೊಂಡಿದ್ದಾರೆ. ಆ ಚಿತ್ರ ಯಾವುದು ಗೊತ್ತಾ? ಆರ್​ಆರ್​ಆರ್​.

ಹೌದು, ಆರ್​ಆರ್​ಆರ್​ ಚಿತ್ರದಲ್ಲಿ ಶ್ರೀಯಾ ನಟಿಸುತ್ತಿದ್ದಾರೆ. ಇತ್ತೀಚೆಗೆ ಇನ್​ಸ್ಟಾಗ್ರಾಂನಲ್ಲಿ ಚಾಟ್​ ಮಾಡುವಾಗ ಅವರೇ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಲಾಕ್​ಡೌನ್​ ಮುಗಿದು ಚಿತ್ರದ ಚಿತ್ರೀಕರಣ ಶುರುವಾದ ಮೇಲೆ, ತಾವು ಹೋಗಿ ಅಭಿನಯಿಸಿ ಬರುವುದಾಗಿ ಅವರು ಹೇಳಿಕೊಂಡಿದ್ದಾರೆ.

ಇಷ್ಟಕ್ಕೂ ಈ ಚಿತ್ರೆದಲ್ಲಿ ಶ್ರೀಯಾ ಅವರ ಪಾತ್ರವೇನು ಎಂಬ ಪ್ರಶ್ನೆ ಬರುವುದು ಸಹಜ. ಏಕೆಂದರೆ, ಈಗಾಗಲೇ ನಾಯಕಿಯಾಗಿ ಆಲಿಯಾ ಭಟ್​ ಅಭಿನಯಿಸುತ್ತಿದ್ದಾರೆ. ಹಾಗಿರುವಾಗ ಶ್ರೀಯಾ ಏನು ಮಾಡಬಹುದು ಎಂದರೆ, ಅಲ್ಲೊಂದು ಟ್ವಿಸ್ಟ್​ ಇದೆ. ಛತ್ರಪತಿಯಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದ ಅವರು, ಈ ಬಾರಿ ಪೋಷಕ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಈಗಾಗಲೇ ಗೊತ್ತಿರುವಂತೆ, ಅಜಯ್​ ದೇವಗನ್​ ಅವರು ಈ ಚಿತ್ರದಲ್ಲೊಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಶೂಟಿಂಗ್​ನಲ್ಲಿ ಸಹ ಭಾಗವಹಿಸಿದ್ದಾರೆ. ಚಿತ್ರದಲ್ಲಿ ಅವರ ಪತ್ನಿಯಾಗಿ ನಟಿಸುತ್ತಿದ್ದಾರಂತೆ ಶ್ರೀಯಾ. ಚಿತ್ರದ ಫ್ಲಾಶ್​ಬ್ಯಾಕ್​ನಲ್ಲಿ ಶ್ರೀಯಾ ಪಾತ್ರ ಬರಲಿದ್ದು, ಚಿಕ್ಕ ಪಾತ್ರವಾದರೂ, ಅದೊಂದು ಪ್ರಮುಖ ಪಾತ್ರ ಎಂದು ಅವರೇ ಹೇಳಿಕೊಂಡಿದ್ದಾರೆ.

ಇನ್ನು ಆರ್​ಆರ್​ಆರ್​ ಚಿತ್ರದಲ್ಲಿ ಜ್ಯೂನಿಯರ್ ಎನ್​.ಟಿ.ಆರ್​ ಮತ್ತು ರಾಮ್​ಚರಣ್​ ತೇಜ ಮೊದಲ ಬಾರಿಗೆ ಜತೆಯಾಗಿ ನಟಿಸುತ್ತಿದ್ದಾರೆ. ಈಗಾಗಲೇ ಚಿತ್ರದ ಶೇ 75ರಷ್ಟು ಚಿತ್ರೀಕರಣ ಮುಗಿದಿದ್ದು, 2021ರ ಸಂಕ್ರಾಂತಿ ಸಮಯದಲ್ಲಿ ಚಿತ್ರ ಬಿಡುಗಡೆ ಎಂದು ಮೊದಲು ಹೇಳಲಾಗಿತ್ತು. ಆದರೆ, ಲಾಕ್​ಡೌನ್​ನಿಂದಾಗಿ ಚಿತ್ರೀಕರಣ ಚಟುವಟಿಕೆಗಳು ಸ್ಥಗಿತಗೊಂಡಿದ್ದರಿಂದ, ಚಿತ್ರದ ಬಿಡುಗಡೆ ಸ್ವಲ್ಪ ಮುಂದಕ್ಕೆ ಹೋಗುವ ಸಾಧ್ಯತೆಗಳಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net